ಮೋದಿಗೆ 75 ವರ್ಷವಾಗ್ತಿದೆ; ಬದಲಾಗ್ತಾರಾ ಪ್ರಧಾನಿ..?
ದೇಶಕ್ಕೆ ಮೋದಿ ಅಲ್ಲದಿದ್ದರೆ ಮತ್ತಿನ್ಯಾರು..?, ವಿರೋಧ ಪಕ್ಷಗಳಲ್ಲಿ ಪ್ರಧಾನಿಯಾಗುವ ಅರ್ಹತೆ ಯಾರಿಗಿದೆ..?. ಕಳೆದ ಹತ್ತು ವರ್ಷಗಳಿಂದ ದೇಶದ ಬಹುತೇಕರು ಕೇಳುತ್ತಿದ್ದ ಪ್ರಶ್ನೆಗಳಿವು.. ಆದ್ರೆ ಈಗ ಬಿಜೆಪಿಯಲ್ಲಿ ಮೋದಿ ನಂತರ ಯಾರು..? ಅನ್ನೋ ಪ್ರಶ್ನೆ ಎದುರಾಗುತ್ತಿದೆ.. ಸತತ ಮೂರನೇ ಬಾರಿ ಪ್ರಧಾನಿಯಾಗಿರೋ ನರೇಂದ್ರ ಮೋದಿ ವಯಸ್ಸು 2025ರ ಸೆಪ್ಟೆಂಬರ್ 17ಕ್ಕೆ 75 ವರ್ಷ ತುಂಬುತ್ತಿದೆ.. 75 ವರ್ಷ ತುಂಬಿದವರಿಗೆ ಬಿಜೆಪಿಯಲ್ಲಿ ಯಾವುದೇ ಅಧಿಕಾರ ನೀಡೋದಿಲ್ಲ ಎಂಬ ಅಲಿಖಿತ ನಿಯಮವನ್ನು ಕಳೆದ ಹತ್ತು ವರ್ಷದಿಂದ ಪಾಲಿಸಲಾಗುತ್ತಿದೆ.. ಹಾಗಾದ್ರೆ ಈ ನಿಯಮ ಪ್ರಧಾನಿ ಮೋದಿಯವರಿಗೂ ಅನ್ವಯವಾಗುತ್ತಾ..? ಪ್ರಧಾನಿ ಮೋದಿ ಮುಂದಿನ ವರ್ಷ ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಾರಾ..? ಬಿಟ್ಟುಕೊಟ್ಟರೆ ಮುಂದಿನ ಪ್ರಧಾನಿ ಯಾರಾಗ್ತಾರೆ..? ಎಂಬ ಪ್ರಶ್ನೆಗಳು ಎದ್ದಿವೆ..
ಅಂದಹಾಗೆ, ಈ 75 ವರ್ಷಕ್ಕೆ ಇರುವ ರಾಜಕೀಯ ಪ್ರಾಧಾನ್ಯತೆ ಅರ್ಥ ಮಾಡಿಕೊಳ್ಳಬೇಕಾದರೆ ಈ ಹಿಂದೆ ಬೇರೆ ಬೇರೆ ಸಮಯದಲ್ಲಿ ಹಲವು ರಾಜಕೀಯ ನಾಯಕರು ನೀಡಿರುವ ಹೇಳಿಕೆಗಳನ್ನೊಮ್ಮೆ ನಾವು ಮೆಲುಕು ಹಾಕಬೇಕಾಗುತ್ತೆ.. ಬೇಲ್ ಪಡೆದು ಜೈಲಿನಿಂದ ಹೊರಬಂದಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, 2024ರ ಮೇ 11ರಂದು ಒಂದು ಹೇಳಿಕೆ ನೀಡಿದ್ದರು. 2025r ಸೆಪ್ಟೆಂಬರ್ 17ಕ್ಕೆ ಮೋದಿ 75ನೇ ವರ್ಷ ಪೂರೈಸಲಿದ್ದಾರೆ.. 75 ವರ್ಷ ತುಂಬಿದವರು ಅಧಿಕಾರದಿಂದ ಕೆಳಗಿಳಿಯಬೇಕು ಅನ್ನೋ ನಿಯಮವನ್ನು 2014ರಲ್ಲೇ ಮೋದಿ ತಂದಿದ್ದಾರೆ ಎಂದು ಕೆಜ್ರಿವಾಲ್ ನೆನಪಿಸಿದ್ದರು..
ಇದನ್ನೂ ಓದಿ; ರಾಖಿ ಹಬ್ಬಕ್ಕೆ ತವರಿಗೆ ಹೋಗ್ತೀನೆಂದ ಪತ್ನಿ; ಮೂಗು ಕತ್ತರಿಸಿದ ಪತಿ!
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಾ, ನಾನು ಕೇಜ್ರಿವಾಲ್‌ಗೂ ಹಾಗೂ ಇಂಡಿಯಾ ಒಕ್ಕೂಟಕ್ಕೂ ಒಂದು ಮಾತು ಹೇಳಬೇಕು ಅಂತಿದೀನಿ.. ಮೋದಿಗೆ 75 ವರ್ಷ ಪೂರ್ತಿಯಾಗುತ್ತಿದೆ ಎಂದು ಖುಷಿ ಪಡೋದಕ್ಕೆ ಹೋಗಬೇಡಿ.. ಆ ನಿಯಮ ಬಿಜೆಪಿ ಪಕ್ಷದಲ್ಲಿ ಎಲ್ಲೂ ಇಲ್ಲ.. ಮೋದಿಯವರೇ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುತ್ತಾರೆ.. ಅವರೇ ದೇಶದ ನಾಯಕತ್ವ ವಹಿಸುತ್ತಾರೆ.. ಈ ವಿಷಯದಲ್ಲಿ ನಮಗೆ ಯಾವ ಅನುಮಾನಗಳೂ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದರು..
ಇಲ್ಲಿ ನಾವು ಗಮನಿಸಬೇಕಾದ ವಿಷಯವೇನು ಅಂದ್ರೆ ಈ ಹೇಳಿಕೆಗಳೆಲ್ಲಾ ಲೋಕಸಭಾ ಚುನಾವಣೆಗೂ ಮೊದಲು ನೀಡಿದಂತಹವು.. ಆದ್ರೆ ಈಗ ಲೋಕಸಭಾ ಚುನಾವಣೆಯಲ್ಲಿ 400ರ ಗಡಿ ದಾಟಬೇಕೆಂಬ ಬಿಜೆಪಿ ಕನಸು ಛಿದ್ರವಾಗಿದೆ.. ಈ ಕಾರಣದಿಂದ ಚುನಾವಣೆ ಫಲಿತಾಂಶದ ನಂತರ ಮೋದಿ ವಾರಸುದಾರರು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.. ಹಾಗಾದರೆ ಬಿಜೆಪಿಯಲ್ಲಿ ಮೋದಿ ವಾರಸುದಾರರು ಯಾರಾಗಬಹುದು..? ಇದರಲ್ಲಿ ಆರ್‌ಎಸ್‌ಎಸ್ ಪಾತ್ರ ಎಷ್ಟಿರುತ್ತೆ..?.
ಇದನ್ನೂ ಓದಿ; ಐಫೋನ್ ಬೇಕೆಂದು ಮಗ ಹಠ; ಆಸೆ ಪೂರೈಸಿದ ಹೂ ಮಾರೋ ತಾಯಿ!
ಇಲ್ಲಿ ಸಂಘ ಪರಿವಾರ ಕೂಡಾ ಪ್ರಮುಖ ಪಾತ್ರ ವಹಿಸುತ್ತೆ.. ಯಾಕಂದ್ರೆ ಬಿಜೆಪಿ ಬಲಹೀನವಾದ ಸಂದರ್ಭದಲ್ಲೆಲ್ಲಾ ಪಕ್ಷದಲ್ಲಿ ಸಂಘದ ಪಾತ್ರ ಹೆಚ್ಚಾಗುತ್ತೆ.. ಮೋದಿ ನಂತರ ಯಾರು ಎಂಬ ಪ್ರಶ್ನೆ ಬಂದಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರುಗಳು ಬಲವಾಗಿ ಕೇಳಿಬರುತ್ತವೆ.. ಇನ್ನು ಸದ್ಯದ ಪರಿಸ್ಥಿತಿ ನೋಡಿದರೆ ವಾರಸತ್ವಕ್ಕಾಗಿ ಯೋಗಿ ಹಾಗೂ ಅಮಿತ್ ಶಾ ನಡುವೆ ಯುದ್ಧವೇ ನಡೆಯುತ್ತಿದೆ ಅನ್ನೋದೂ ಅರ್ಥವಾಗುತ್ತದೆ..
ಇದನ್ನೂ ಓದಿ; ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!
ಅಷ್ಟಕ್ಕೂ ಈ 75 ವರ್ಷದ ವಾದ ಯಾವಾಗಿಂದ ಶುರುವಾಯ್ತು..?
2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದಾಗ, ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮುಂತಾದ ಅಗ್ರ ಗಣ್ಯ ನಾಯಕರಿಗೆ ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್‌ನಲ್ಲಾಗಲೀ, ಮಂತ್ರಿಮಂಡಲದಲ್ಲಾಗಲೀ ಅವಕಾಶ ಕಲ್ಪಿಸಲಿಲ್ಲ.. ಸಲಹಾ ಮಂಡಳಿಯಲ್ಲಿ ಮಾತ್ರ ಈ ಇಬ್ಬರು ನಾಯಕರಿಗೆ ಅವಕಾಶ ನೀಡಲಾಯಿತು.. ಆ ಸಮಯದಲ್ಲಿ ಅಡ್ವಾಣಿಯವರಿಗೆ 86 ವರ್ಷ ವಯಸ್ಸಾಗಿತ್ತು.. ಜೋಷಿ 80 ವರ್ಷಆಸುಪಾಸಿನಲ್ಲಿದ್ದರು.. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ 91 ವರ್ಷವಾಗಿದ್ದ ಎಲ್.ಕೆ.ಅಡ್ವಾಣಿ ಹಾಗೂ 86 ವರ್ಷದ ಮುರಳಿ ಮನೋಹರ ಜೋಶಿಯವರಿಗೆ ಟಿಕೆಟ್ ನೀಡಲಿಲ್ಲ.. ಆ ಸಂದರ್ಭದಲ್ಲಿ ಅಮಿತ್ ಶಾ ಅವರು ದಿ ವೀಕ್ ಗೆ ಸಂದರ್ಶನ ನೀಡಿದ್ದರು.. ಆಗ 75 ವರ್ಷ ದಾಟಿದ ಯಾರಿಗೂ ಟಿಕೆಟ್ ಕೊಟ್ಟಿಲ್ಲ. ಇದು ನಮ್ಮ ಪಾರ್ಟಿ ನಿರ್ಧಾರ ಎಂದು ಹೇಳಿದ್ದರು..
2016ರಲ್ಲಿ ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ ಸಮಯದಲ್ಲೂ ಕೂಡಾ 75 ವರ್ಷ ತುಂಬಿದ ಬಾಬೂಲಾಲ್ ಗೌರ್, ಸರ್ತಾಜ್ ಸಿಂಗ್ ಮುಂತಾದವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು.. 80 ವರ್ಷ ದಾಟಿದ ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೂ ಯಾವುದೇ ಹುದ್ದೆ ನೀಡಲಿಲ್ಲ.. ಹಿಮಾಚಲ ಪ್ರದೇಶದ ಪ್ರಮುಖ ಬಿಜೆಪಿ ನಾಯಕ ಶಾಂತ ಕುಮಾರ್ ಅವರನ್ನು ಕೂಡಾ ವಯಸ್ಸಿನ ಕಾರಣ ನೀಡಿ ಪಕ್ಕಕ್ಕಿಡಲಾಯಿತು.. ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಲ್ಲದೆ ಬಿಜೆಪಿ ಪಕ್ಷ ಇಲ್ಲ ಅನ್ನೋ ಪರಿಸ್ಥಿತಿಯಲ್ಲೂ ಅವರಿಗೂ ವಯಸ್ಸಿನ ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸಲಾಯಿತು..
ಇದನ್ನೂ ಓದಿ; ಸುದ್ದಿಗೋಷ್ಠಿ ವೇಳೆ ಕುಸಿದುಬಿದ್ದ ಸಿದ್ದರಾಮಯ್ಯ ಬೆಂಬಲಿಗ ಸಾವು!
ಆದ್ರೆ 75 ವರ್ಷ ಮೀರಿದವರು ಚುನಾವಣೆಯಲ್ಲಿ ಸ್ಪರ್ಧಿಬಾರದು ಎಂಬ ನಿಯಮವನ್ನಾಗಲೀ, ಸಂಪ್ರದಾಯವಾಗಲೀ ಬಿಜೆಪಿ ಪಾರ್ಟಿಯಲ್ಲಿಲ್ಲ ಎಂದು ಈ ಹಿಂದೆಯೇ ಅಮಿತ್ ಶಾ ಹೇಳಿದ್ದರು.. ಇದಕ್ಕೆ ಉದಾಹರಣೆ ಎಂಬಂತೆ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ 80 ವರ್ಷ ದಾಟಿದ್ದರೂ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ.. ಈ ಹಿಂದೆ ಕಲ್‌ರಾಜ್ ಮಿಶ್ರಾ, ನಜ್ಮಾ ಹೆಫ್ತುಲ್ಲಾ ಹಾಗೂ ಈಗ ಜಿತನ್ ರಾಮ್ ಮಾಂಝಿ 75 ವರ್ಷ ದಾಟಿದ್ದರೂ ಅವರಿಗೆ ಮೋದಿ ಕ್ಯಾಬಿನೆಟ್‌ನಲ್ಲಿ ಅವಕಾಶ ನೀಡಲಾಗಿತ್ತು.. ಇದರಲ್ಲಿ ಜಿತನ್ ರಾಮ್ ಮಾಂಝಿ ಬಿಜೆಪಿ ನಾಯಕ ಆಗದಿದ್ದರೂ, ಅವರ ಎನ್‌ಡಿಎ ಒಕ್ಕೂಟದ ಪಾರ್ಟಿಯ ಸದಸ್ಯ ಅನ್ನೋದು ಇಲ್ಲಿ ಗಮನಿಸಬೇಕಾದ ಅಂಶ..
ಇದನ್ನೂ ಓದಿ; ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕುತ್ತಿಗೆಗೆ ಇರಿದುಕೊಂಡ ಬಾಲಕಿ!
ಆರ್‌ಎಸ್‌ಎಸ್ ಹಾಗೂ ಮೋದಿ ನಡುವೆ ಅಂತರ ಹೆಚ್ಚಾಗಿದೆಯಾ..?
2024ರ ಮೇ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಂದರ್ಶನ ನೀಡಿದ್ದರು.. ಅದರಲ್ಲಿ ಅವರು ಮಾತನಾಡುತ್ತಾ, ಮೊದಲಿಗೆ ಬಿಜೆಪಿ ಪ್ರಬಲವಾಗಿರಲಿಲ್ಲ. ಆಗ ನಮಗೆ ಆರ್‌ಎಸ್‌ಎಸ್‌ನ ಅವಶ್ಯಕತೆ ಇತ್ತು.. ಆದ್ರೆ ಈಗ ಪರಿಸ್ಥಿತಿ ಬೇರೆ ಇದೆ.. ಬಿಜೆಪಿ ದೊಡ್ಡದಾಗಿ ಬೆಳೆದಿದೆ.. ನಾವು ಸ್ವಂತವಾಗಿ ಸಂಘಟನೆ ಮಾಡಿಕೊಳ್ಳೋ ಶಕ್ತಿ ಇರುವುದರಿಂದ ಪಾರ್ಟಿ ಸ್ವತಂತ್ರವಾಗಿಯೇ ಮುನ್ನಡೆಯುತ್ತದೆ ಎಂದು ಹೇಳಿದ್ದರು..
ನಡ್ಡಾ ಅವರ ಈ ಹೇಳಿಕೆ ಆರ್‌ಎಸ್‌ಎಸ್ ವಯಲದಲ್ಲಿ ದೊಡ್ಡ ಆಕ್ರೋಶಕ್ಕೆ ಗುರಿಯಾಗಿತ್ತು.. ಇನ್ನು ಮಾಹಿತಿಯ ಪ್ರಕಾರ 2024ರ ಜೂನ್ 4ರಂದು ಸರ್ಕಾರ ರಚನೆಗೂ ಮುನ್ನ ಬಿಜೆಪಿ ಹಿರಿಯ ನಾಯಕ ಹಾಗೂ ಮೋದಿ ಸಂಪುಟದಲ್ಲಿದ್ದ ಹಿರಿಯ ಸಚಿವರೊಬ್ಬರು ಆರ್‌ಎಸ್‌ಎಸ್ ನಾಯಕರನ್ನು ಭೇಟಿಯಾಗಲು ದೆಹಲಿಯಲ್ಲಿರುವ ಕಾರ್ಯಾಲಯಕ್ಕೆ ಹೋಗಿದ್ದರಂತೆ.. ಆಗ ಬಿಜೆಪಿ ಸಂಸದೀಯ ಪಾರ್ಟಿ ಸಭೆ ನಡೆಸಿ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕೆಂದು ಆರ್‌ಎಸ್‌ಎಸ್ ಸೂಚನೆ ನೀಡಿತ್ತಂತೆ.. ಆದ್ರೆ ಈ ಸಭೆ ನಡೆಯಲೇ ಇಲ್ಲ.. ನೇರವಾಗಿ ಎಸ್‌ಡಿಎ ಸಭೆ ನಡೆಯಿತು.. ಅಲ್ಲಿಯೇ ಮೋದಿಯವರನ್ನು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.. ಬಿಜೆಪಿ ವೆಬ್‌ಸೈಟ್‌ನಲ್ಲಿ ಕೂಡಾ ಎನ್‌ಡಿಎ ಸಮಾವೇಶದ ಪತ್ರಿಕಾ ಪ್ರಕಟಣೆ ಹಾಕಲಾಗಿತ್ತೇ ಹೊರತು, ಶಾಸಕಾಂಗ ಸಭೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.. ಆದ್ರೆ 2019ರಲ್ಲಿ ಬಿಜೆಪಿ 303 ಸೀಟುಗಳನ್ನು ಗೆದ್ದಿತ್ತು. ಆಗ ಫಲಿತಾಂಶ ಪ್ರಕಟವಾದ ಮರುದಿನ ಅಂದರೆ ಮೇ 24ರಂದು ಬಿಜೆಪಿ ಪಾರ್ಟಿಮೆಂಟರಿ ಸಭೆ ನಡೆದಿತ್ತು.. ಆದ್ರೆ ಆಗ ಎನ್‌ಡಿಎ ಸಭೆ ಏರ್ಪಪಡಿಸಿರಲಿಲ್ಲ..
ಇದನ್ನೂ ಓದಿ; ಜಪ್ತಿ ಮಾಡಿದ್ದ 72 ಲಕ್ಷ ರೂ. ದುರ್ಬಳಕೆಮಾಡಿಕೊಂಡ ಪೊಲೀಸಪ್ಪ!
ಕೆಲವರು ಹೇಳುವ ಪ್ರಕಾರ ಸದ್ಯ ಬಿಜೆಪಿ ಗೆದ್ದಿರುವ 240 ಸಂಸದರಲ್ಲಿ 140 ಸಂಸದರು ನಮ್ಮವರೇ ಎಂದು ಆರ್‌ಎಸ್‌ಎಸ್ ನಾಯಕರು ಹೇಳುತ್ತಾರಂತೆ.. ಒಂದು ವೇಳೆ ಬಿಜೆಪಿ ಪಾರ್ಟಿಮೆಂಟರಿ ಸಭೆ ನಡೆದಿದ್ದರೆ ನಾಯಕನನ್ನಾಗಿ ಮೋದಿಯವರನ್ನು ಆಯ್ಕೆ ಮಾಡದೇ ಇರಬಹುದಿತ್ತು.. ಅದಕ್ಕೇ ಸಭೆ ನಡೆಸಲಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಪಾರ್ಲಿಮೆಂಟರಿ ಸಭೆಯ ಬದಲಾಗಿ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಜೊತೆ ಸಭೆ ನಡೆಸಿ ಅವರ ಬೆಂಬಲ ಪಡೆದುಕೊಂಡು ಎನ್ಡಿಎ ಹೆಸರಲ್ಲೇ ವ್ಯವಹಾರ ನಡೆಯಿತು.. ಇದು ಕೂಡಾ ಆರ್‌ಎಸ್‌ಎಸ್‌ಗೆ ಇಷ್ಟವಾಗಿಲ್ಲ ಎಂದು ಹೇಳಲಾಗುತ್ತದೆ..
ಒಂದು ಕಡೆ ಮೋದಿಯವರ ಬಗ್ಗೆ ಆರ್‌ಎಸ್‌ಎಸ್ ನಾಯಕರಲ್ಲಿ ಅಸಮಾಧಾನವಿದೆ ಅನ್ನೋದು ಮೇಲ್ನೋಟಕ್ಕೆ ಅರ್ಥವಾಗುತ್ತದೆ.. ಮತ್ತೊಂದು ಕಡೆ ದೇಶದ ರಾಜಕೀಯದಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ರಂತಹ ನಾಯಕರು ಪ್ರಬಲರಾಗುತ್ತಿದ್ದಂತೆ ಕಾಣುತ್ತಿದೆ.. ಈ ಸಮಯದಲ್ಲೇ ಮೋದಿಗೆ ವಯಸ್ಸಾಗುತ್ತಿರುವುದು, ಜನರ ಮನಸ್ಥಿತಿ, ಸೆಂಟಿಮೆಂಟ್‌ಗಳು ಬದಲಾಗುತ್ತಿರುವುದು, ಮಿತ್ರಪಕ್ಷಗಳ ಬಲದಿಂದ ಮೋದಿ ಅಧಿಕಾರ ಹಿಡಿಯವ ಪರಿಸ್ಥಿತಿ ಬಂದಿರುವುದು ನೋಡುತ್ತಿದ್ದರೆ ಮೋದಿ ವಾರಸುದಾರರ ಅವಶ್ಯಕತೆ ಬಿಜೆಪಿಗೆ ಇದ್ದೇ ಇದೆ ಎನಿಸುತ್ತದೆ..
ಇನ್ನು ಮೋದಿ ನಂತರ ಯಾರು ಅಂತ ಬಂದಾಗ ಯೋಗಿ ಆದಿತ್ಯನಾತ್ ಹಾಗೂ ಅಮಿತ್ ಶಾ ಹೆಸರುಗಳು ಪ್ರಮುಖವಾಗಿ ಕಾಣಿಸುತ್ತವೆ.. ಆದ್ರೆ ಯೋಗಿ ವರ್ಚಸ್ಸು ಕಡಿಮೆ ಮಾಡಲು ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.. ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸ್ಥಾನಗಳು ಕಡಿಮೆಯಾದವು.. ಇದಕ್ಕೆ ಕಾರಣ ಅಮಿತ್ ಶಾ ಎಂಬ ಆರೋಪವಿದೆ.. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಸೂಚಿಸಿದವರಿಗೆ ಟಿಕೆಟ್ ನೀಡದೇ ಅಮಿತ್ ಶಾ ಅವರು ತಮಗೆ ಬೇಕಾದವರಿಗೆ ಟಿಕೆಟ್ ನೀಡಿದ್ದೇ ಸೋಲಿಗೆ ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತವೆ.. ಲೋಕಸಭಾ ಚುನಾವಣೆಯ ನಂತರ ಬಿಜೆಪಿಯಲ್ಲಿ ಯೋಗಿ ಆದಿತ್ಯನಾಥ್ ವಿರೋಧಿ ಅಲೆ ಎಬ್ಬಿಸಲಾಗಿದೆ.. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳೂ ನಡೆಯುತ್ತಿವೆ ಅನ್ನೋದು ಗುಟ್ಟಾಗೇನೂ ಉಳಿದಿಲ್ಲ..
ಇದನ್ನೂ ಓದಿ; ರಿಷಬ್ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ
ಯೋಗಿ ಆದಿತ್ಯನಾಥ್‌ಗೆ ಆರ್‌ಎಸ್‌ಎಸ್ ಬೆಂಬಲ ಪ್ರಬಲವಾಗಿದೆ.. ಯೋಗಿಯನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಬಲ ಇನ್ನಷ್ಟು ಕಡಿಮೆಯಾಗುತ್ತೆ ಅನ್ನೋ ಅಭಿಪ್ರಾಯವಿದೆ.. ಹೀಗಾಗಿ ಅವರನ್ನು ಕೆಳಗಿಳಿಸುವುದು ಅಷ್ಟು ಸಲುಭವಲ್ಲ.. ತನ್ನ ನಂತರ ಅಮಿತ್ ಶಾ ತನ್ನ ಸ್ಥಾನ ತುಂಬಬೇಕು ಎಂದು ಮೋದಿ ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಉತ್ತರ ಪ್ರದೇಶದಲ್ಲಿ ಸೀನಿಯರ್ ಅಧಿಕಾರಿಗಳ ವಿಷಯದಲ್ಲಿ ತಿಕ್ಕಾಟ, ಸ್ಮಾರ್ಟ್ ಮೀಟರ್‌ಗಳ ವ್ಯವಹಾರ, ಅದಾನಿ ಟೆಂಡರ್ ರದ್ದು ಮಾಡಿದ್ದು ಯೋಗಿ ಹಾಗೂ ಮೋದಿ ಸರ್ಕಾರದ ನಡುವೆ ಉಂಟಾಗಿರುವ ಗ್ಯಾಪ್ ಗೆ ಉದಾಹರಣೆ ಎಂದೇ ಹೇಳಬಹುದು..
2009ರಲ್ಲಿ ನಿತಿನ್ ಗಡ್ಕರಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಿದ್ದು, ಯೋಗಿಯವರನ್ನು ಉತ್ತರ ಪ್ರದೇಶ ಸಿಎಂ ಮಾಡಿದ್ದು, ಮಹಮದ್ ಅಲಿ ಜಿನ್ನಾ ಅವರನ್ನು ಸೆಕ್ಯುಲರ್ ಎಂದು ಕರೆದ ಅಡ್ವಾಣಿಯವರನ್ನು 2005ರ ಜೂನ್‌ನಲ್ಲಿ ಬಿಜೆಪಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿದ ಪ್ರಮುಖ ನಿರ್ಧಾರಗಳ ಹಿಂದೆ ಆರ್‌ಎಸ್‌ಎಸ್ ಇತ್ತು.
2024ರ ಲೋಕಸಭಾ ಚುನಾವಣೆಯಲ್ಲಿ ಜಾತಿ ಮುಖ್ಯವಾಗಿ ಕೆಲಸ ಮಾಡಿತ್ತು.. ರಾಹುಲ್ ಗಾಂಧಿ ಸೇರಿ ಹಲವಾರು ಪ್ರತಿಪಕ್ಷಗಳ ನಾಯಕರು ಇವತ್ತಿಗೂ ಜಾತಿ ಗಣತಿ ವಿಚಾರವನ್ನು ಮುಂದಿಟ್ಟೇ ರಾಜಕೀಯ ಮಾಡುತ್ತಿದ್ದಾರೆ.. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಗೆಲುವಿನಲ್ಲಿ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತರನ್ನು ವಿಶೇಷವಾಗಿ ಪರಿಗಣಿಸಿದ್ದೇ ಕಾರಣ.. ಕಳೆದ ಹತ್ತು ವರ್ಷಗಳಲ್ಲಿ ದೇಶ ರಾಜಕೀಯದಲ್ಲಿ ಹಿಂದುತ್ವದ ಅಜೆಂಡಾ ಹೆಚ್ಚು ಕೆಲಸ ಮಾಡಿತ್ತು.. ಆದ್ರೆ ಈಗ ಆ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ.. ಈಗ ಧರ್ಮ ರಾಜಕೀಯ ಹಿಂದೆ ಬಿದ್ದಿದ್ದು ಜಾತಿ ರಾಜಕೀಯ ಮುಂದೆ ನಡೆಯುತ್ತಿದೆ..
2024ರ ಲೋಕಸಭಾ ಚುನಾವಣೆಯಲ್ಲೇ ಹಿಂದುತ್ವಕ್ಕೆ ಮತದಾರರು ಹೆಚ್ಚು ಪಲವು ತೋರಿಸಿಲ್ಲ ಅನ್ನೋದು ಗೊತ್ತಾಗಿದೆ.. ಇದರ ಜೊತೆಯಲ್ಲೇ ಬಿಜೆಪಿ ಪತನ ಕೂಡಾ ಶುರುವಾಗುತ್ತಿದೆಯಾ ಅನ್ನೋ ಅನುಮಾನವೂ ಮೂಡುತ್ತಿದೆ.. ಜೊತೆಗೆ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಪ್ರಭಾವ ಕೂಡಾ ಕಡಿಮೆಯಾಗುತ್ತಿರುವುದನ್ನು ದೇಶದ ಜನ ಗಮನಿಸಿದ್ದಾರೆ.. ಒಂದು ವೇಳೆ ಇದು ಹೀಗೇ ಮುಂದುವರೆದರೆ ಮೂರನೇ ವ್ಯಕ್ತಿಯನ್ನು ಆರ್‌ಎಸ್‌ಎಸ್ ತೆರೆ ಮೇಲೆ ತರಲೂಬಹುದು..
ಇದನ್ನೂ ಓದಿ; 18 ಮನೆ ಕಳವು ಮಾಡಿದ್ದ ಕೆಜಿಎಫ್ ಗ್ಯಾಂಗ್ ಅಂದರ್!
ಮೋದಿ ಸ್ಥಾನಕ್ಕೆ ಯೋಗಿ, ಅಮಿತ್ ಶಾ ಅಲ್ಲದಿದ್ದರೆ ಮತ್ತಿನ್ಯಾರು..? ಅನ್ನೋ ಪ್ರಶ್ನೆ ಇಲ್ಲಿ ಮೂಡುತ್ತೆ.. ಆಗ ನಮಗೆ ಕಾಣಸಿಗೋದು ನಿತಿನ್ ಗಡ್ಕರಿ ಹಾಗೂ ರಾಜನಾಥ್ ಸಿಂಗ್.. ಇವರಿಬ್ಬರೂ ಒಂದು ಕಾಲದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದವರು.. ಆದ್ರೆ ರಾಜ್‌ನಾಥ್ ಸಿಂಗ್ ಅವರದ್ದು ಮೋದಿಯ ವಯಸ್ಸು, ಗಡ್ಕರಿ ವಯಸ್ಸು ಸ್ವಲ್ಪ ಕಡಿಮೆ ಅಷ್ಟೇ.. ಗಡ್ಕರಿಗೆ ಆರ್‌ಎಸ್‌ಎಸ್ ಜೊತೆ ಉತ್ತಮ ಸಂಬಂಧಗಳಿವೆ.. ಇನ್ನು ದೇಶ ರಾಜಕೀಯದಲ್ಲಿ ಹಿಂದುತ್ವ ರಾಜಕೀಯ ಮುಂದುವರೆಯುತ್ತಾ..? ಅಥವಾ ಜಾತಿ ರಾಜಕೀಯ ಶುರುವಾಗುತ್ತಾ..? ಅನ್ನೋದು ಮೋದಿ ವಾರಸುದಾರ ಯಾರು ಅನ್ನೋದನ್ನು ತೀರ್ಮಾನ ಮಾಡುತ್ತವೆ.. ಒಂದು ವೇಳೆ ಜಾತಿ ರಾಜಕೀಯ ಮುಂಚೂಣಿಗೆ ಬಂದರೆ ಆಗ ಶಿವರಾಜ್ ಸಿಂಗ್ ಚವಾಣ್ ಹೆಸರು ಮುಂದೆ ಇರುತ್ತದೆ ಎಂದು ಕೆಲವರು ಹೇಳುತ್ತಾರೆ.. ಇವರು ದೀರ್ಘ ಕಾಲ ಸಿಎಂ ಆಗಿ ಕೆಲಸ ಮಾಡಿದ್ದಾರೆ.. ಜೊತೆಗೆ ಜನಪ್ರಿಯ ನಾಯಕರೂ ಹೌದು..
ಆದ್ರೆ ಸದ್ಯದ ಬೆಳವಣಿಗೆ ನೋಡಿದರೆ, ವಯಸ್ಸು ಮೀರಿದರೂ ಮೋದಿಯವರೇ ಪ್ರಧಾನಿಯಾಗಿ ಮುಂದುವರೆಯುತ್ತಾರೆ.. ಈ ಐದು ವರ್ಷ ಕಂಪ್ಲೀಟ್ ಮಾಡೋ ಸಾಧ್ಯತೆಯೇ ಹೆಚ್ಚಿದೆ.. ಆದ್ರೆ ಅನಂತರವಾದರೂ ಆ ಸ್ಥಾನ ತುಂಬುವವರು ಯಾರು ಅನ್ನೋದೇ ಈಗಿರುವ ಪ್ರಶ್ನೆ.. ಯಾಕಂದ್ರೆ, 2029ರ ಲೋಕಸಭಾ ಚುನಾವಣೆಯ ಚಿತ್ರಣ ಬೇರೆಯದೇ ರೀತಿಯಲ್ಲಿರಬಹುದು ಅಂತ ಪ್ರತಿಯೊಬ್ಬರೂ ಊಹಿಸಿದ್ದಾರೆ..