ಜಾನಪದ ಹಾಡಿಗೆ ಹೆಜ್ಜೆ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಜಯನಗರ; ನಿನ್ನೆ ಹಂಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಊರಿನ ಕಲಾವಿದರ ಜೊತೆ ಜಾನಪದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿವೆ.
ಸಿದ್ದರಾಮಯ್ಯ ಅವರು ಚಿಕ್ಕವರಿದ್ದಾಗ ವೀರ ಮಕ್ಕಳ ಕುಣಿತ ಕಲಿತಿದ್ದರು. ಅದನ್ನು ಈಗಲೂ ಅವರು ಮಾಡುತ್ತಾರೆ. ತಮ್ಮ ಹುಟ್ಟೂರು ಸಿದ್ದರಾಮನಹುಂಡಿಗೆ ಹೋದಾಗ, ಏನಾದರೂ ಕಾರ್ಯಕ್ರಮವಿದ್ದರೆ ಸಿದ್ದರಾಮಯ್ಯ ಅವರು ಅವರ ಬಾಲ್ಯ ಸ್ನೇಹಿತರ ಜೊತೆ ವೀರಮಕ್ಕಳ ಕುಣಿತ ಮಾಡುತ್ತಾರೆ. ಈ ಹಿಂದೆ ತಮ್ಮ ಊರಿನಲ್ಲಿ ವೀರಮಕ್ಕಳ ಕುಣಿತ ಮಾಡಿದ್ದ ಸಿದ್ದರಾಮಯ್ಯ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಅಂದಹಾಗೆ ಹಂಪಿಯಲ್ಲಿ ನಿನ್ನೆ ನಡೆದ ಕಾರ್ಯಕ್ರಮಕ್ಕೂ ಸಿಎಂ ಅವರ ಸ್ವಕ್ಷೇತ್ರ ವರುಣಾದಿಂದಲೂ ನೃತ್ಯಗಾರರನ್ನು ಕರೆಸಲಾಗಿತ್ತು. ವರುಣಾ ಕ್ಷೇತ್ರದ ಕಲಾವಿದರು ವೇದಿಕೆ ಮೇಲೆ ನೃತ್ಯ ಪ್ರದರ್ಶನ ಶುರು ಮಾಡಿದಾಗ ಸಿಎಂ ಸಿದ್ದರಾಮಯ್ಯ ಕೂಡಾ ಅವರ ಜೊತೆ ಸೇರಿಕೊಂಡು, ತಮ್ಮ ಒಡನಾಡಿಗಳ ಜೊತೆ ಹೆಜ್ಜೆ ಹಾಕಿ ಖುಷಿ ಪಟ್ಟರು.
ಏನಯ್ಯ ಶಂಬುಲಿಂಗವೇ ಎಂಬ ಹಾಡಿಗೆ ಸಿದ್ದರಾಮಯ್ಯ ಅವರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಸಿದ್ದರಾಮಯ್ಯ ಕುಣಿತವನ್ನು ನೋಡ ನೋಡುತ್ತಿದ್ದಂತೆ ಶಾಸಕರು ಹಾಗೂ ಸಚಿವರು ಸಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದಾರೆ.