DistrictsPolitics

Mandya Politics; ಮಂಡ್ಯದಲ್ಲಿ ಮತ್ತೆ ಸುಮಲತಾ-ನಿಖಿಲ್‌ ಕುಮಾರಸ್ವಾಮಿ ಫೈಟ್‌..?

ಮಂಡ್ಯ; ಲೋಕಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿವೆ. ಇನ್ನೆರಡು ಮೂರು ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಇದಕ್ಕಾಗಿ ಎಲ್ಲರೂ ಸಿದ್ಧತೆ ಆರಂಭ ಮಾಡಿದ್ದಾರೆ. ಅದ್ರಲ್ಲೂ ಕಳೆದ ಬಾರಿ ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರ (Mandya Loksabha) ಈ ಬಾರಿಯೂ ಕೂಢಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ. ಕಳೆದ ಬಾರಿ ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿದ್ದ ಸುಮಲತಾ ಅಂಬರೀಶ್‌ ( Sumalatha ambarish) ಪ್ರಚಂಡ ಗೆಲುವು ಸಾಧಿಸಿದ್ದರು. ಈ ಬಾರಿ ಈ ಇಬ್ಬರು ನಾಯಕರೇ ಮತ್ತೆ ಫೈಟ್‌ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಂಡ್ಯದಲ್ಲಿ ಮತ್ತೆ ನಿಖಿಲ್‌ ಸ್ಪರ್ಧೆ..?

ನಿಖಿಲ್‌ ಕುಮಾರಸ್ವಾಮಿಯವರು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಜೆಡಿಎಸ್‌ (JDS) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅವರಿಗೆ ಬಿಜೆಪಿ (BJP) ಬೆಂಬಲ ವ್ಯಕ್ತಪಡಿಸಿತ್ತು. ಅಂದು ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರೇ ಇದ್ದರು. ಆದರೂ ಕೂಡಾ ನಿಖಿಲ್‌ ಕುಮಾರಸ್ವಾಮಿಯವರು ಬರೋಬ್ಬರಿ 1.20 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಬಾರಿ ಜೆಡಿಎಸ್‌ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿಯವರನ್ನೇ ಕಣಕ್ಕಿಳಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮಂಡ್ಯ ಕ್ಷೇತ್ರವನ್ನು ಬಿಜೆಪಿ ನಾಯಕರು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಬಿಜೆಪಿಯಿಂದ ಟಿಕೆಟ್‌ ಬಯಸಿರುವ ಸಂಸದೆ ಸುಮಲತಾ ಅಂಬರೀಶ್‌ ಅವರು ಕಾಂಗ್ರೆಸ್‌ ಸೇರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿರುವ ಎಲ್ಲಾ ಸಾಧ್ಯತೆಗಳೂ ಇವೆ.

ಇದನ್ನೂ ಓದಿ;Loksabha Election; ಒಂದೂ ಕ್ಷೇತ್ರ ಬಿಡಬೇಡಿ; 28ಕ್ಕೆ 28 ಕ್ಷೇತ್ರವೂ ಗೆಲ್ಲಿ – ಬಿಜೆಪಿ ಹೈಕಮಾಂಡ್‌ ಮೆಗಾಪ್ಲ್ಯಾನ್‌

ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ನಿಖಿಲ್‌

ಈ ಬಾರಿ ಮಂಡ್ಯದಲ್ಲಿ ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ನಿಖಿಲ್‌ ಕಳೆದ ಬಾರಿ ಸೋಲನುಭವಿಸಿದ್ದರಿಂದ ಅದೇ ಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸುವ ಛಲ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನಿಖಿಲ್‌ ಕುಮಾರಸ್ವಾಮಿಯವರು ಮತ್ತೆ ಮಂಡ್ಯದಲ್ಲಿ ಸ್ಪರ್ಧೆ ಮಾಡಬಹುದು ಎಂಬ ಅನುಮಾನಗಳಿಗೆ ಪುಷ್ಠಿ ಕೂಡಾ ಸಿಕ್ಕಿದೆ. ಯಾಕಂದ್ರೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಿಖಿಲ್‌ ಕುಮಾರಸ್ವಾಮಿಯವರು ಮಂಡ್ಯ ಕ್ಷೇತ್ರದಲ್ಲಿ ಪ್ರವಾಸ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದೇ ತಿಂಗಳು ಎರಡನೇ ವಾರದಿಂದ ಮಂಡ್ಯ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ರೌಂಡ್ಸ್‌ ಹಾಕಲು ನಿಖಿಲ್‌ ಕುಮಾರಸ್ವಾಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತದಾರರ ನಾಡಿಮಿಡಿತ ಹೇಗಿದೆ..? ಸ್ಥಳೀಯ ಜೆಡಿಎಸ್‌ ಮುಖಂಡರ ಬೇಡಿಕೆ ಏನಿದೆ..? ಈ ಬಾರಿ ಚುನಾವನಣೆಗೆ ನಿಂತರೆ ಗೆಲ್ಲೋದಕ್ಕೆ ಸಾಧ್ಯವಾ..? ಎಂಬುದರ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ಅರಿಯಲಿದ್ದಾರೆ. ಪ್ರವಾಸದ ವೇಳೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ನಿಖಲ್‌ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಎಲ್ಲಾ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ;ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಚಿಕ್ಕಬಳ್ಳಾಪುರ ಟಿಕೆಟ್‌ ಫಿಕ್ಸ್‌; ದೇವಮೂಲೆ ಪಾಲಿಟಿಕ್ಸ್‌ ಶುರು!

ನಿಖಿಲ್‌ಗೆ ಈ ಬಾರಿ ಸಿಂಪಥಿ ಮತಗಳು ಸಿಗುವ ಸಾಧ್ಯತೆ

ನಿಖಿಲ್‌ ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದಾಗ, ಅವರ ತಂದೆಯೇ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರು. ಜೊತೆಗೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ ಶಾಸಕರಿದ್ದರು. ಆದರೂ ಕೂಡಾ ಜನ ಸ್ವಾಭಿಮಾನಕ್ಕೆ ಮತ ಹಾಕಿದ್ದರು. ಸುಮಲತಾ ಅಂಬರೀಶ್‌ ಗೆಲುವು ಸಾಧಿಸಿದ್ದರು. ಅನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್‌ ಸ್ಪರ್ಧೆ ಮಾಡಿದ್ದರು. ಅಲ್ಲೂ ಕೂಡಾ ನಿಖಿಲ್‌ ಕುಮಾರಸ್ವಾಮಿ ಹೀನಾಯವಾಗಿ ಸೋತಿದ್ದರು. ಹಾಗೆ ನೋಡಿದರೆ ನಿಖಿಲ್‌ ಕುಮಾರಸ್ವಾಮಿ ಚೆನ್ನಾಗಿ ಜನ ಸಂಪರ್ಕ ಇಟ್ಟುಕೊಂಡಿದ್ದಾರೆ. ಜನರ ಜೊತೆ ಚೆನ್ನಾಗಿ ಬೆರೆಯುತ್ತಾರೆ. ಜನರ ಕಷ್ಟ ವಿಚಾರಿಸುತ್ತಾರೆ. ಹೀಗಿದ್ದರೂ ಜನ ಎರಡು ಬಾರಿ ಸೋಲಿಸಿದ್ದಾರೆ. ಈ ಕಾರಣಕ್ಕಾಗಿಯೇ ಈ ಬಾರಿ ನಿಖಿಲ್‌ಗೆ ಸಿಂಪಥಿ ಮತಗಳು ಹೆಚ್ಚಾಗಿ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ;ಫೆಬ್ರವರಿ 9ಕ್ಕೆ ಅಮಿತ್‌ ಶಾ ರಾಜ್ಯಕ್ಕೆ ಆಗಮನ; ಜೋರಾಗುತ್ತಾ ಅಪರೇಷನ್‌..?

ಮಂಡ್ಯದಲ್ಲೇ ಸ್ಪರ್ಧೆ ಮಾಡೋದು ಎನ್ನುತ್ತಿರುವ ಸುಮಲತಾ..!

ಸುಮಲತಾ ಅಂಬರೀಶ್‌ ಅವರು ಕಾನೂನಿನಡಿಯಲ್ಲಿ ಪಕ್ಷೇತರ ಸಂಸದರಾಗಿದ್ದುಕೊಂಡು ಬೇರೆ ಪಕ್ಷಕ್ಕೆ ಸೇರೋದಕ್ಕೆ ಆಗೋದಿಲ್ಲ. ಹೀಗಾಗಿ ಪಕ್ಷ ಸೇರದಿದ್ದರೂ, ಬಿಜೆಪಿ ಜೊತೆ ಹಲವು ತಿಂಗಳುಗಳಿಂದ ಗುರುತಿಸಿಕೊಂಡಿದ್ದಾರೆ. ಆದ್ರೆ ಜೆಡಿಎಸ್‌ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡೋದು ಬಹುತೇಕ ಫಿಕ್ಸ್‌. ಆದ್ರೆ ಬಿಜೆಪಿ ಟಿಕೆಟ್‌ ಬಯಸಿರುವ ಸುಮಲತಾ ಅವರು ನಾನು ಮಂಡ್ಯ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಸ್ಪರ್ಧೆ ಮಾಡೋದಿಲ್ಲ. ಮಂಡ್ಯ ಇಲ್ಲ ಅಂದ್ರೆ ರಾಜಕೀಯವನ್ನೇ ಬಿಡುತ್ತೇನೆ. ನಾನು ಮಂಡ್ಯಕ್ಕಾಗಿಯೇ ರಾಜಕೀಯಕ್ಕೆ ಬಂದಿರೋದು ಎಂದು ಹೇಳುತ್ತಿದ್ದಾರೆ. ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಇನ್ನೊಂದೆಡೆ, ಸುಮಲತಾ ಅವರಿಗೆ ಬಿಜೆಪಿ ಟಿಕೆಟ್‌ ಕೊಡದಿದ್ದರೆ ಕಾಂಗ್ರೆಸ್‌ ನವರು ಟಿಕೆಟ್‌ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಸಂಭಾವ್ಯರ ಪಟ್ಟಿಯಲ್ಲಿ ಸುಮಲತಾ ಅವರ ಹೆಸರೂ ಇದೆ ಎನ್ನಲಾಗಿದೆ. ಹೀಗಾಗಿ, ಕೊನೇ ಕ್ಷಣದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದರೆ ಸುಮಲತಾ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೆ. ಆಗ ಮತ್ತೆ ಸುಮಲತಾ ಹಾಗೂ ನಿಖಿಲ್‌ ನಡುವೆ ಫೈಟ್‌ ನಡೆಯಲಿದೆ.

 

Share Post