ಫೆಬ್ರವರಿ 9ಕ್ಕೆ ಅಮಿತ್ ಶಾ ರಾಜ್ಯಕ್ಕೆ ಆಗಮನ; ಜೋರಾಗುತ್ತಾ ಅಪರೇಷನ್..?
ಬೆಂಗಳೂರು; ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಕೇಂದ್ರ ಗೃಹ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿರಲಿಲ್ಲ. ಇದೇ ಮೊದಲ ಬಾರಿಗೆ ಅಂದ್ರೆ, ಫೆಬ್ರವರಿ 9ರಂದು ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಎರಡು ದಿನಗಳ ಪ್ರವಾಸ ಇದಾಗಿದ್ದು, ಅವರ ಭೇಟಿ ರಾಜ್ಯ ರಾಜಕೀಯದ ಪಾಲಿಗೆ ಮಹತ್ವದ್ದೆನಿಸಿದೆ. ಅಮಿತ್ ಶಾ ಅವರೇ ನೇರವಾಗಿ ಒಂದಷ್ಟು ಮುಖಂಡರನ್ನು ಪಕ್ಷಕ್ಕೆ ಸೆಳೆಯೋ ಪ್ರಯತ್ನ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಸಭೆಗಳಿಗೆ ಹೆಚ್‌ಡಿಕೆಗೂ ಆಹ್ವಾನ
ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷ ಸಿದ್ಧತೆ ನಡೆಸಿದೆ. ಅದರಲ್ಲೂ ರಾಜ್ಯದಲ್ಲಿ ಬಿ,ವೈ,ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಸಂಘಟನೆ ಜೋರಾಗಿ ನಡೆಯುತ್ತಿದೆ. ಪಕ್ಷ ಬಿಟ್ಟವರನ್ನು ವಾಪಸ್ ಕರೆ ತರೋ ಪ್ರಯತ್ನ ಕೂಡಾ ನಡೆಯುತ್ತಿದೆ. ಜೊತೆಗೆ ರಾಜ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಒಕ್ಕಲಿಗ ಮತಗಳು ಕೂಡಾ ಒಲಿಯುವ ಸಾಧ್ಯತೆ ಇದೆ. ಹೀಗಾಗಿ ಅಮಿತ್ ಶಾ ರಾಜ್ಯದಲ್ಲಿ ಅತಿಹೆಚ್ಚು ಸ್ಥಾಗಳನ್ನು ಗೆಲ್ಲೋದಕ್ಕೆ ರಣತಂತ್ರ ಹೆಣೆಯಲಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಹಲವು ಸಭೆಗಳನ್ನು ನಡೆಸಲಿದ್ದಾರೆ. ಇದಕ್ಕಾಗಿ ಹೆಚ್.ಡಿ.ಕುಮಾರಸ್ವಾಮಿಯವರಿಗೂ ಆಹ್ವಾನ ಕೊಟ್ಟಿದ್ದಾರೆ.
ಎರಡು ದಿನಗಳ ಕಾಲ ಅಮಿತ್ ಶಾ ರಾಜ್ಯ ಪ್ರವಾಸ
ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಅಮಿತ್ ಶಾ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಈಗಾಗಲೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಸರ್ವೇ ರಿಪೋರ್ಟ್ ರೆಡಿಯಾಗಿದೆ. ಅದರ ಪರಾಮರ್ಶೆ ಮಾಡಿ, ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಫೆಬ್ರವರಿ 9ರಂದು ಸುತ್ತೂರು ಜಾತ್ರೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳುತ್ತಾರೆ. ಅನಂತರ ಬೆಂಗಳೂರಿಗೆ ಆಗಮಿಸುವ ಅವರು ಬೆಂಗಳೂರಿನಲ್ಲಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 10ರಂದು ಬೆಳಿಗ್ಗೆಯಿಂದಲೇ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡಾ ಭಾಗವಹಿಸಲಿದ್ದಾರೆ.
ಬೆಂಗಳೂರಿನ ಸಭೆಗಳನ್ನು ಮುಗುಸಿದ ಬಳಿಕ ಅವರು ನೇರವಾಗಿ ದಾವಣಗೆರೆಗೆ ತೆರಳಲಿದ್ದಾರೆ. ಅಲ್ಲಿ ಶಾಮನೂರು ಶಿವಶಂಕರಪ್ಪ ಅತಿಥಿಗೃಹವನ್ನ ಅಮಿತ್ ಶಾ ಲೋಕಾರ್ಪಣೆ ಮಾಡಲಿದ್ದಾರೆ.. ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ದಾವಣಗೆರೆ ಬೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.