BengaluruPolitics

Loksabha Election; ಒಂದೂ ಕ್ಷೇತ್ರ ಬಿಡಬೇಡಿ; 28ಕ್ಕೆ 28 ಕ್ಷೇತ್ರವೂ ಗೆಲ್ಲಿ – ಬಿಜೆಪಿ ಹೈಕಮಾಂಡ್‌ ಮೆಗಾಪ್ಲ್ಯಾನ್‌

ಬೆಂಗಳೂರು; ಲೋಕಸಭಾ ಚುನಾವಣೆಗೆ ಇನ್ನೇನು ಎರಡು-ಮೂರು ತಿಂಗಳು ಬಾಕಿ ಇದೆ. ಆಗಲೇ ಚುನಾವಣಾ ಕಣ ರಂಗೇರುತ್ತಿದೆ. ಅದರಲ್ಲೂ, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯಾದರೆ, ಕಾಂಗ್ರೆಸ್‌ಗೆ ಒಂದೂ ಕ್ಷೇತ್ರದ ಸಿಗದಂತೆ ಮಾಡಲು ಬಿಜೆಪಿ ಹಾಗೂ ಜೆಡಿಎಸ್‌ ಮೆಗಾ ಪ್ಲ್ಯಾನ್‌ ರೆಡಿ ಮಾಡಿವೆ. ಲಿಂಗಾಯತ-ಒಕ್ಕಲಿಗ ವೋಟ್‌ ಬ್ಯಾಂಕ್‌ ಜೊತೆಗೆ ಇತರೆ ಸಂಪ್ರದಾಯಿಕ ಮತಗಳನ್ನು ಒಟ್ಟುಗೂಡಿಸಿಕೊಂಡು ಕಾಂಗ್ರೆಸ್‌ ಖಾತೆ ತೆರೆಯದಂತೆ ಮಾಡಲು ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ. ಅವರ ರಣತಂತ್ರಕ್ಕೆ ಜೆಡಿಎಸ್‌ ತಂತ್ರಗಾರಿಕೆಯೂ ಸಹಕಾರಿಯಾಗುತ್ತಿದೆ. ಹೀಗಾಗಿ, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆ ಗೆಲ್ಲೋದು ದೊಡ್ಡ ಸವಾಲಾಗಿದೆ.

ಫೆಬ್ರವರಿ 9-10ಕ್ಕೆ ಅಮಿತ್‌ ಶಾ ರಾಜ್ಯ ಪ್ರವಾಸ..!

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಚಾಣಕ್ಯ ಎಂದೇ ಬಿಂಬಿತರಾಗಿರುವ ಅಮಿತ್‌ ಶಾ ಅವರು ಫೆಬ್ರವರಿ 9 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಎರಡು ದಿನಗಳ ಕಾಲ ಅವರು ಇಲ್ಲೇ ಇರುತ್ತಾರೆ. ಜೆಡಿಎಸ್‌ ನಾಯಕರನ್ನು ಒಟ್ಟುಗೂಡಿಸಿಕೊಂಡು ಅವರು ಸಭೆಗಳನ್ನು ನಡೆಸಲಿದ್ದಾರೆ. ಅದಕ್ಕಾಗಿ ಖಾಸಗಿ ಹೋಟೆಲ್‌ ಒಂದು ಈಗಾಗಲೇ ಬುಕ್‌ ಆಗಿದೆ. ಮೊದಲ ದಿನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಮಿತ್‌ ಶಾ ಅವರು, ನಂತರ ಬೆಂಗಳೂರಿನಲ್ಲಿ ಹೆಚ್‌.ಡಿ.ಕುಮಾರಸ್ವಾಮಿ, ವಿಜಯೇಂದ್ರ, ಆರ್‌.ಅಶೋಕ್‌, ಯಡಿಯೂರಪ್ಪ, ಬೊಮ್ಮಾಯಿ ಮುಂತಾದವರನ್ನು ಕೂರಿಸಿಕೊಂಡು ಲೋಕಸಭಾ ಚುನಾವಣೆಗೆ ತಂತ್ರಗಾರಿಕೆ ನಡೆಸಲಿದ್ದಾರೆ.

ಶಾಮನೂರು, ಸವದಿಯನ್ನು ಸೆಳೆಯುತ್ತಾರಾ ಅಮಿತ್‌ ಶಾ..?

ಅಮಿತ್‌ ಶಾ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದ ನಂತರ ರಾಜ್ಯಕ್ಕೆ ಕಾಲಿಟ್ಟಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಯನ್ನು ಅಮಿತ್‌ ಶಾ ಗಂಭೀರವಾಗಿ ಪರಿಗಣಿಸಿದ್ದರು. ಹಲವಾರು ತಂತ್ರಗಾರಿಕೆ ನಡೆಸಿದ್ದರು. ರೋಡ್‌ ಶೋ, ರ್ಯಾಲಿಗಳನ್ನು ನಿರ್ವಹಿಸಿದ್ದರು. ಆದ್ರೆ ಅಮಿತ್‌ ಶಾ ತಂತ್ರಗಾರಿಕೆ ವರ್ಕೌಟ್‌ ಆಗಿಲ್ಲ. ಹೀಗಾಗಿ, ಸೋಲಿನ ಬೇಸರದಿಂದ ಅವರು ರಾಜ್ಯ ಬಂದಿರಲಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅದರಲ್ಲೂ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಸ್ಥಾನಗಳನ್ನು ಬರದಂತೆ ನೋಡಿಕೊಳ್ಳಬೇಕೆಂದು ಪಣ ತೊಟ್ಟಿದ್ದಾರೆ. ಫೆಬ್ರವರಿ 10ರಂದು ಅವರು ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ಯಾಕಂದ್ರೆ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್‌ ಪಕ್ಷದಲ್ಲಿರುವ ಪ್ರಬಲ ಲಿಂಗಾಯತ ನಾಯಕರು. ಅವರ ಪುತ್ರ ಎಸ್‌ಎಸ್‌ ಮಲ್ಲಿಕಾರ್ಜುನ್‌ ಅವರು ಕೂಡಾ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಆದ್ರೆ ಇತ್ತೀಚೆಗೆ ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗದಲ್ಲಿ ಮಾತನಾಡುತ್ತಾ ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಈ ಬಾರಿಯೂ ಗೆಲ್ಲಿಸಿ ಎಂದಿದ್ದಾರೆ. ಹೀಗಾಗಿ, ಶಾಮನೂರು ಕೂಡಾ ಈ ಬಾರಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈಗಾಗಲೇ ಯಡಿಯೂರಪ್ಪ ಸೇರಿ ಹಲವರು ಶಾಮನೂರು ಜೊತೆ ಮಾತುಕತೆ ಆಡಿದ್ದಾರೆ ಎನ್ನಲಾಗಿದೆ. ಇದೀಗ ಅಮಿತ್‌ ಶಾ ಅವರು ದಾವಣಗೆರೆಗೇ ಆಗಮಿಸುತ್ತಿದ್ದಾರೆ. ಸಾಧ್ಯವಾದರೆ ಅಮಿತ್‌ ಶಾ ಅವರು ಶಾಮನೂರು ಮನೆಗೆ ಭೇಟಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಶಾಮನೂರು ಅವರ ಮನವೊಲಿಸುವ ಸಾಧ್ಯತೆ ಇದೆ.

ವಿಧಾನಸಭಾ ಚುನಾವಣೆ ಸಮಯದಲ್ಲಿ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಇದೀಗ ಅವರು ಕಾಂಗ್ರೆಸ್‌ನಲ್ಲಿ ಶಾಸಕರು. ಆದ್ರೆ ಇತ್ತೀಚೆಗೆ ಸವದಿ ಜೊತೆಗೆ ಕಾಂಗ್ರೆಸ್‌ಗೆ ಬಂದಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ವಾಪಸ್‌ ಹೋಗಿದ್ದಾರೆ. ಹೀಗಾಗಿ ಸವದಿಯನ್ನು ಕೂಡಾ ಸೆಳೆಯೋ ಪ್ಲ್ಯಾನ್‌ ಮಾಡಲಾಗುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಸೇರಿ ಹಲವರು ಈಗಾಗಲೇ ಸವದಿ ಅವರನ್ನು ಸಂಪರ್ಕ ಮಾಡಿದ್ದಾರೆ. ಇದೀಗ ರಾಜ್ಯಕ್ಕೆ ಬರುತ್ತಿರುವ ಅಮಿತ್‌ ಶಾ ಅವರು ಅಂತಿಮವಾಗಿ ಸವದಿ ಜೊತೆ ಮಾತುಕತೆ ಆಡಲಿದ್ದಾರೆ. ಅವರು ಬಿಜೆಪಿಗೆ ಬಂದರೆ ಏನೆಲ್ಲಾ ಅವಕಾಶ ಸಿಗಲಿವೆ ಎಂಬುದನ್ನು ತಿಳಿಸಿ ಅವರ ಮನವೊಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜನಾರ್ದನರೆಡ್ಡಿ ವಿಚಾರ ಕೂಡಾ ಫೈನಲ್‌ ಆಗುತ್ತಾ..?

ಜೈಲಿಗೆ ಹೋಗಿ ಬಂದ ಮೇಲೆ ಬಿಜೆಪಿಗೆ ವಾಪಸ್‌ ಸೇರಿಸಿಕೊಳ್ಳದಿದ್ದರೆ ಮಾಜಿ ಸಚಿವ ಜನಾರ್ದನರೆಡ್ಡಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದರು. ಅವರು ಒಬ್ಬರು ಮಾತ್ರ ಗೆದ್ದಿದ್ದಾರೆ. ಉಳಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣರಾಗಿದ್ದಾರೆ. ಇದೀಗ ಜನಾರ್ದನರೆಡ್ಡಿಯವರು ಬಿಜೆಪಿಗೆ ವಾಪಸ್‌ ಆಗೋಕೆ ಮನಸು ಮಾಡಿದ್ದಾರೆ. ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಕೂಡಾ ಜನಾರ್ದನರೆಡ್ಡಿಯವರನ್ನು ಬಿಜೆಪಿಗೆ ಕರೆತರುಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್‌ ಇದಕ್ಕೆ ಇನ್ನೂ ಗ್ರೀನ್‌ ಸಿಗ್ನಲ್‌ ಕೊಟ್ಟಿಲ್ಲ. ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದಾಗ ಈ ಬಗ್ಗೆ ಚರ್ಚೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಜನಾರ್ದನರೆಡ್ಡಿ ವಿಚಾರವೂ ಈ ಭೇಟಿಯಲ್ಲಿ ಫೈನಲ್‌ ಆಗೋದು ಬಹುತೇಕ ಪಕ್ಕಾ ಎನ್ನಲಾಗಿದೆ.
ಇದರ ಜೊತೆ ಯಾವ್ಯಾವ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಗಳನ್ನಾಗಿ ಮಾಡಬೇಕು. ಹಾಲಿ ಇರುವ ಯಾವ ಸಂಸದರವನ್ನು ಕೈಬಿಡಬೇಕು ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಲಿದೆ.

 

 

Share Post