DistrictsPolitics

ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಚಿಕ್ಕಬಳ್ಳಾಪುರ ಟಿಕೆಟ್‌ ಫಿಕ್ಸ್‌; ದೇವಮೂಲೆ ಪಾಲಿಟಿಕ್ಸ್‌ ಶುರು!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಡಾ.ಕೆ.ಸುಧಾಕರ್‌ ಸೋಲನುಭವಿಸಿದ್ದರು. ಇದೀಗ ಅವರು ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಅವರು ತೀರ್ಮಾನ ಮಾಡಿದ್ದಾರೆ. ಇದೇ ಕಾರಣಕ್ಕೆ ವರಿಷ್ಠರ ಜೊತೆ ಮಾತನಾಡೋದಕ್ಕಾಗಿ ಅವರು ಇತ್ತೀಚೆಗೆ ದೆಹಲಿಗೆ ತೆರಳಿದ್ದರು. ಈ ವೇಳೆ ವರಿಷ್ಠರು ಸುಧಾಕರ್‌ ಸ್ಪರ್ಧೆಗೆ ಸಮ್ಮತಿ ಸೂಚಿಸಿದ್ದಾರಂತೆ. ಈ ವಿಚಾರವನ್ನು ಸ್ವತಃ ಸುಧಾಕರ್‌ ಅವರೇ ಹೇಳಿಕೊಂಡಿದ್ದಾರೆ. ಅಷ್ಟೇ ಏಕೆ, ಅವರು ಈಗಾಗಲೇ ಸಂಘಟನೆ ಕೂಡಾ ಶುರು ಮಾಡಿದ್ದಾರೆ. 

ದೇವಮೂಲೆ ಆಯ್ಕೆ ಮಾಡಿಕೊಂಡ ಸುಧಾಕರ್‌

ಡಾ.ಕೆ.ಸುಧಾಕರ್‌ ಅವರು ಮೊದಲಿನಿಂದಲೂ ದೇವರು, ದಿಂಡರನ್ನು ಹೆಚ್ಚಾಗಿ ನಂಬುತ್ತಾರೆ. ಇದೀಗ ಅವರು, ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜ್ಯೋತಿಷಿ ಹೇಳಿದಂತೆ ಅವರು ದೇವ ಮೂಲೆಯಿಂದ ಪಕ್ಷ ಸಂಘಟನೆ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಯಾಕಂದ್ರೆ, ಸುಧಾಕರ್‌ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೇವ ಮೂಲೆಯಾಗಿರುವ ಚೇಳೂರು ತಾಲ್ಲೂಕಿನಿಂದ ಪಕ್ಷ ಸಂಘಟನೆ ಶುರು ಮಾಡಿದ್ದಾರೆ.

 ಜೆಡಿಎಸ್‌ ನಾಯಕರಿಂದಲೂ ಸುಧಾಕರ್‌ ಸ್ಪರ್ಧೆಗೆ ಸಮ್ಮತಿ

ಚೇಳೂರು ತಾಲೂಕಿನ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಧಾಕರ್‌ ಈಗಾಗಲೇ ಸುತ್ತಾಟ ನಡೆಸಿದ್ದಾರೆ. ರಾಶ್ಚೆರವು, ಚಾಕವೇಲು, ಸಜ್ಜಲವಾರಪಲ್ಲಿ, ನಲ್ಲಗುಟ್ಲಪಲ್ಲಿ, ಗಂಗಮ್ಮ ಬೆಟ್ಟ, ಪಾಳ್ಯಕೆರೆ ಗ್ರಾಮಗಳಿಗೆ ಭೇಟಿ ನೀಡಿದ್ದ ಸುಧಾಕರ್‌ ಅವರು ಈ ಬಾರಿ ನಾನೇ ಸ್ಪರ್ಧೆ ಮಾಡುತ್ತಿದ್ದೇನೆ. ನನಗೇ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

ಡಾ.ಕೆ.ಸುಧಾಕರ್‌ ಅವರು ಕೇಂದ್ರ ಬಿಜೆಪಿ ನಾಯಕರನ್ನು ಭೇಟಿ ಮಾಡುವುದಕ್ಕೂ ಮೊದಲು ಜೆಡಿಎಸ್‌ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿಯವರನ್ನೂ ಭೇಟಿ ಮಾಡಿದ್ದರು. ಅವರು ಕೂಡಾ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಸ್ಪರ್ಧೆಗೆ ಒಪ್ಪಿಗೆ ಕೊಟ್ಟಿದ್ದಾರಂತೆ. ಹೀಗಾಗಿ ಬಹುತೇಕ ಅವರ ಲೈನ್‌ ಕ್ಲಿಯರ್‌ ಆದಂತೆಯೇ ಲೆಕ್ಕ. ಯಾವಾಗ ಟಿಕೆಟ್‌ ಸಿಗೋದು ಪಕ್ಕಾ ಆಯ್ತೋ ಡಾ.ಕೆ.ಸುಧಾಕರ್‌ ಫುಲ್‌ ಆಕ್ಟೀವ್‌ ಆಗಿದ್ದಾರೆ.

 

Share Post