BengaluruPoliticsUncategorized

ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲ ಎಂದು ಶಾ ಒಪ್ಪಿಕೊಂಡಿದ್ದಾರೆ; ಡಿಕೆಶಿ

ಬೆಂಗಳೂರು; ಅಮಿತ್ ಶಾ ಅವರ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅಮಿತ್ ಶಾ ಅವರು ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಇಲ್ಲ ಎಂದು ಒಪ್ಪಿಕೊಂಡಿರುವುದನ್ನು ನಾನು ಅಭಿನಂದಿಸುತ್ತೇನೆ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಹೀಗಾಗಿ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕತ್ವವನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದ ವಿಚಾರಗಳೇ ಬೇರೆ. ದೇಶದ ವಿಚಾರಗಳೇ ಬೇರೆ ಎಂದು ಹೇಳಿದರು.

ರಾಜ್ಯದಲ್ಲಿನ ಆಡಳಿತ, ಅಭಿವೃದ್ಧಿಯ ವಿಚಾರ ಗಣನೆಗೆ ಬರುತ್ತದೆ. ಇಡೀ ವಿಶ್ವ ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದೆ. ನಾವು ಜ.11 ರಿಂದ ರಾಜ್ಯ ಪ್ರವಾಸ ಆರಂಭಿಸುತ್ತಿದ್ದು, ಎಲ್ಲ ಮೂಲೆ, ಮೂಲೆಗಳನ್ನು ತಲುಪಿ ಎಲ್ಲ ವರ್ಗದ ಜನರನ್ನು ಭೇಟಿ ಮಾಡಲಾಗುವುದು. ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳಲ್ಲಿದ್ದು, ಈ ಸರ್ಕಾರ ಮಾಡಿರುವ ಅನ್ಯಾಯವನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿ ಸರ್ಕಾರದ ಅಂತ್ಯವಾಗಿ ಕಾಂಗ್ರೆಸ್ ಸರ್ಕಾರ ಬರಲಿದೆ’ ಎಂದು ತಿಳಿಸಿದರು.

ನಂದಿನಿ ಹಾಗೂ ಅಮೂಲ್ ವಿಲೀನವಿಲ್ಲ. ಕೇವಲ ತಂತ್ರಜ್ಞಾನ ವಿನಿಮಯ ಮಾತ್ರ ಎಂಬ ಮುಖ್ಯಮಂತ್ರಿಗಳ ಸ್ಪಷ್ಟನೆಗೆ, ‘ಬೊಮ್ಮಾಯಿ ಅವರು ಈ ಪ್ರಕರಣವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ಅಮಿತ್ ಶಾ ಅವರು ಏನು ಹೇಳಿದ್ದಾರೆ ಎಂಬುದನ್ನು ಒಮ್ಮೆ ಕೇಳಿ ನೋಡಿ. ಅಮಿತ್ ಶಾ ಅವರು ಸಾರ್ವಜನಿಕ ವೇದಿಕೆಯಲ್ಲಿ ನೀಡಿರುವ ಹೇಳಿಕೆ ಬಹಿರಂಗವಾಗಿದೆ. ನಾವು ಇದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಈ ವಿಚಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ರಾಜ್ಯಗಳ ವಿಚಾರವೇ ಹೊರತು ರಾಷ್ಟ್ರೀಯ ವಿಚಾರವಲ್ಲ. ನೀವು ಕನಕಪುರಕ್ಕೆ ಹೋಗಿ ಅಲ್ಲಿನ ಹಾಲು ಉತ್ಪಾದನೆ ಘಟಕವನ್ನು ನೋಡಿ. ಅದು ಅಮೂಲ್ ಸಂಸ್ಥೆಗಿಂತ ಹಾಗೂ ಏಷ್ಯಾದಲ್ಲೇ ಅತ್ಯುತ್ತಮ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಘಟಕ. ರಾಜ್ಯದಲ್ಲಿ ಇಂತಹ ತಂತ್ರಜ್ಞಾನ ಇರುವಾಗ ನಮಗೆ ಬೇರೆ ರಾಜ್ಯದ ತಂತ್ರಜ್ಞಾನದ ಅಗತ್ಯವಿಲ್ಲ. ನಮ್ಮ ರಾಜ್ಯದ ಮಾದರಿಯು ಗುಜರಾತ್ ಮಾದರಿಗಿಂತ ಉತ್ತಮವಾಗಿದೆ. ಅಮೂಲ್ ಕೊರಿಯನ್ ಕ್ರಾಂತಿಯ ಫಲವಾಗಿದೆ. ಹೀಗಾಗಿ ನಾವು ಅವರನ್ನು ಗೌರವಿಸುತ್ತೇವೆ’ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿ ವಿಚಾರಕ್ಕಿಂತ ಲವ್ ಜಿಹಾದ್ ವಿಚಾರವನ್ನು ಪ್ರಸ್ತಾಪಿಸಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವ ಬಗ್ಗೆ ಕೇಳಿದಾಗ, ‘ಇದು ಅತ್ಯಂತ ಕೆಟ್ಟ ಸಂದೇಶವಾಗಿದೆ. ಇದು ಅವರು ಅಭಿವೃದ್ಧಿಗೆ ಆದ್ಯತೆ ನೀಡುವುದಕ್ಕಿಂತ, ದ್ವೇಷ ಪಸರಿಸಿ, ದೇಶವನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿರುವುದಕ್ಕೆ ಸಾಕ್ಷಿ. ನಾವುಅಭಿವೃದ್ಧಿ, ಉದ್ಯೋಗ ಸೃಷ್ಟಿ, ಜನರ ಹೊಟ್ಟೆ ತುಂಬಿಸುವ, ಬೆಲೆ ಏರಿಕೆ ನಿಯಂತ್ರಣ, ಜನರ ಬದುಕಿನ ಬಗ್ಗೆ ಗಮನ ಹರಿಸಿದರೆ, ಅವರು ಜನರ ಭಾವನೆಗಳ ಮೇಲೆ ಗಮನ ಹರಿಸುತ್ತಿದ್ದಾರೆ’ ಎಂದು ತಿಳಿಸಿದರು.

 

Share Post