ಮೈಸೂರಿಗೆ ಯದುವೀರ್ ಯಾಕೆ..?; ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು ಗೊತ್ತಾ..?
ಮೈಸೂರು; ಪ್ರತಾಪ ಸಿಂಹ ಸತತ ಎರಡು ಬಾರಿ ಮೈಸೂರು-ಕೊಡಗು ಸಂಸದರಾಗಿದ್ದರು.. ಮೂರನೇ ಬಾರಿ ಟಿಕೆಟ್ ಕೊಟ್ಟಿದ್ದರೆ ಅವರೇ ಗೆಲ್ತಾ ಇದ್ದರು.. ಯಾಕಂದ್ರೆ ಅವರಷ್ಟೇ ಅವರ ಕೆಲಸಗಳೂ ಮಾತಾಡುತ್ತವೆ.. ವಿರೋಧಿಗಳು ಕೂಡಾ ಪ್ರತಾಪ ಸಿಂಹ ಅವರ ಕೊಡುಗೆಗಳನ್ನು ಅಲ್ಲಗೆಳೆಯೋದಿಲ್ಲ. ಹೀಗಿದ್ದರೂ ಬಿಜೆಪಿ ಹೈಕಮಾಂಡ್ ಬೇಡ ಬೇಡ ಎಂದರೂ ಒಪ್ಪಿಸಿ ರಾಜವಂಶಸ್ಥ ಯದುವೀರ್ ಅವರನ್ನು ಅಭ್ಯರ್ಥಿ ಮಾಡುತ್ತಿದೆ.. ಗೆಲ್ಲೋ ಅಭ್ಯರ್ಥಿ, ಬಿಜೆಪಿ ನಿಷ್ಠೆ ಇರುವ ಕಾರ್ಯಕರ್ತ ಪ್ರತಾಪ ಸಿಂಹ ಬಿಟ್ಟು ಬಿಜೆಪಿ ಹೈಕಮಾಂಡ್ ಬೇರೆ ಯೋಚನೆ ಯಾಕೆ ಮಾಡ್ತು ಅನ್ನೋದೇ ಪ್ರಶ್ನೆ.. ಹಾಗಂತ ಕಾರಣ ಇಲ್ಲ ಅಂತೇನೂ ಇಲ್ಲ.. ಇದರ ಹಿಂದೆ ದೊಡ್ಡ ತಂತ್ರಗಾರಿಕೆಯೇ ಅಡಗಿದೆ..
ಬಿಜೆಪಿ ಬೇರೂರಿಸೋಕೆ ಒಬ್ಬ ನಾಯಕ ಬೇಕು;
ಕರ್ನಾಟಕದಲ್ಲಿ ಬಹುತೇಕ ಬಿಜೆಪಿ ಪ್ರಬಲವಾಗಿದೆ.. ವಿಧಾನಸಭಾ ಚುನಾವಣೆಯಲ್ಲಿ ಸೋಲೋದಕ್ಕೆ ಕಾರಣಗಳು ಏನೇನೋ ಇದ್ದವಾದರೂ, ಬಿಜೆಪಿ ರಾಜ್ಯದಲ್ಲಿ ಈಗಲೂ ಸ್ಟ್ರಾಂಗ್ ಇದೆ.. ಇದಕ್ಕೆ ಕಾರಣ ಲಿಂಗಾಯತರು.. ಬರೀ ಲಿಂಗಾಯತರು, ಬ್ರಾಹ್ಮಣರು ಮಾತ್ರ ಬೆಂಬಲಕ್ಕಿದ್ದರೆ ಯಾವಾಗಲೂ ಕರ್ನಾಟಕವನ್ನು ಗೆಲ್ಲೋದಕ್ಕೆ ಸಾಧ್ಯವಿಲ್ಲ.. ಬಿಜೆಪಿಗೆ ಒಕ್ಕಲಿಗರ ಬೆಂಬಲವೂ ಬೇಕು.. ಆದ್ರೆ ಈಗಲೂ ಒಕ್ಕಲಿಗರು ದೇವೇಗೌಡರ ಕುಟುಂಬದ ಬೆನ್ನ ಹಿಂದೆಯೇ ಇದ್ದಾರೆ.. ಹೀಗಾಗಿ ಗೌಡರ ಕುಟುಂಬದ ತೆಕ್ಕೆಯಿಂದ ಹಳೇ ಮೈಸೂರು ಭಾಗದ ಮತಗಳನ್ನು ಬಿಜೆಪಿಯತ್ತ ಸೆಳೆಯಬೇಕು.. ಅದಕ್ಕೆ ಯಡಿಯೂರಪ್ಪ ಅವರಂತಹ ಒಬ್ಬ ನಾಯಕ ಬೇಕು.. ಅಂತಹ ನಾಯಕ ಒಕ್ಕಲಿಗರಲ್ಲಿ ಬಿಜೆಪಿಗೆ ಯಾರೂ ಸಿಗಲಿಲ್ಲ.. ಆದ್ರೆ ಮೈಸೂರು ಸಂಸ್ಥಾನ ಮಂಡ್ಯ, ಮೈಸೂರು ಭಾಗಕ್ಕೆ ನೀಡಿದ ಕೊಡುಗೆಗೆ ಜನ ಈಗಲೂ ಬೆಲೆ ಕೊಡುತ್ತಾರೆ.. ಹೀಗಾಗಿ ಯದುವೀರ್ ರನ್ನು ಹಳೇ ಮೈಸೂರು ಭಾಗದಲ್ಲಿ ನಾಯಕನನ್ನಾಗಿ ಬೆಳೆಸಿ ಈ ಭಾಗದಲ್ಲೂ ಬಿಜೆಪಿ ಬೇರೂರುವಂತೆ ಮಾಡೋದಕ್ಕೆ ಬಿಜೆಪಿ ಹೈಕಮಾಂಡ್ ಭರ್ಜರಿ ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ಪ್ರತಾಪ ಸಿಂಹ ತಲೆದಂಡವಾಗುತ್ತಿದೆ.
ವಿಧಾನಸಭಾ ಚುನಾವಣೆ ವೇಳೆ ನಾಯಕನ ಹುಟ್ಟು ಹಾಕಲು ಯತ್ನ;
ಕಳೆದ ವಿಧಾನಸಭಾ ಚುನಾವಣೆ ವೇಳೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಾರ ಮಾಡಿದ್ದಿದ್ದರೆ ಕಾಂಗ್ರೆಸ್ ಗೆಲ್ಲೋದು ಕಷ್ಟವಾಗುತ್ತಿತ್ತು. ಆದ್ರೆ ಬಿಜೆಪಿ ನಾಯಕರು ಹಳೇ ಮೈಸೂರು ಭಾಗದ ಒಕ್ಕಲಿಗ ಮತಗಳನ್ನು ಸೆಳೆಯೋ ಪ್ಲ್ಯಾನ್ ಮಾಡಿದ್ದರು.. ಅದಕ್ಕಾಗಿ ಒಬ್ಬ ಒಕ್ಕಲಿಗ ನಾಯಕನನ್ನು ಹುಟ್ಟು ಹಾಕಲು ಪ್ರಯತ್ನಿಸಿದ್ದರು.. ಮಂಡ್ಯ ಭಾಗದ ಜೆಡಿಎಸ್, ಕಾಂಗ್ರೆಸ್ ನಾಯಕರನ್ನು ಸೆಳೆಯಲು ಅಶ್ವತ್ಥನಾರಾಯಣ, ಡಾ.ಕೆ.ಸುಧಾಕರ್, ಆರ್.ಅಶೋಕ್ ಮುಂತಾದವರಿಗೆ ಟಾಸ್ಕ್ ಕೊಟ್ಟಿದ್ದರು.. ರಾಮನಗರದ ಬಳಿಯ ಬೆಟ್ಟದಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟಿಸುವ, ಕೆಂಪೇಗೌಡ ಹುಟ್ಟೂರು ಅಭಿವೃದ್ಧಿ ಮಾಡುವ ಭರವಸೆಗಳನ್ನು ನೀಡಲಾಗಿತ್ತು.. ಉರಿಗೌಡ, ನಂಜೇಗೌಡರ ಅಸ್ತ್ರವನ್ನೂ ಪ್ರಯೋಗಿಸಲಾಗಿತ್ತು.. ಆದ್ರೆ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಒಂಚೂರೂ ವರ್ಕೌಟ್ ಆಗಲಿಲ್ಲ.. ಬೇರೆ ಪಕ್ಷದಿಂದ ಪ್ರಬಲನಾಯಕನೂ ಬರಲಿಲ್ಲ.. ಪಕ್ಷದಲ್ಲಿದ್ದವರೂ ನಾಯಕರಾಗಿ ಬೆಳೆಯಲಿಲ್ಲ.
ಗೌಡರ ಕುಟುಂಬದ ಸ್ನೇಹ ಮಾಡುತ್ತಲೇ ಗೌಡರ ಮತ ಸೆಳೆಯೋ ತಂತ್ರ;
ರಾಜ್ಯದಲ್ಲಿ ಗೌಡರ ಮತಗಳು ಒಂದಷ್ಟು ಪರ್ಸೆಂಟ್ ಸಿಕ್ಕಿಬಿಟ್ಟರೆ ಬಿಜೆಪಿ ಸಾಕಷ್ಟ ಪ್ರಬಲವಾಗಿಬಿಡುತ್ತೆ.. ಅದಕ್ಕಾಗಿಯೇ, ಈ ಬಾರಿ ಜೆಡಿಎಸ್ ಜೊತೆ ಸ್ನೇಹ ಬೆಳೆಸಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೇರೂರಿಸೋ ಪ್ಲ್ಯಾನ್ ನಡೆದಿದೆ.. ಜಾತ್ಯತೀತದ ಮಂತ್ರ ಪಠಿಸುತ್ತಿದ್ದ ಕುಮಾರಣ್ಣನಿಗೆ ಕೇಸರಿ ಶಾಲು ಹಾಕಿದ್ದೂ ಆಗಿದೆ.. ಇನ್ನು ಕೆರಗೋಡು ಘಟನೆ ಮೂಲಕ ಹಿಂದುತ್ವದ ಬೀಜವನ್ನು ಬಿತ್ತಾಗಿದೆ.. ಹಳೇ ಮೈಸೂರು ಭಾಗದಲ್ಲಿ ಗೌಡಿಕೆ ಪ್ರಬಲವಾಗಿದೆ.. ಹಿಂದುತ್ವಕ್ಕಿಂತ ಗೌಡ ಅನ್ನೋ ಸ್ವಾಭಿಮಾನ ಹೆಚ್ಚಾಗಿದೆ.. ಇದೇ ಸ್ವಾಭಿಮಾನ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಇಷ್ಟು ದಿನ ಉಳಿಸಿದೆ.. ಗೌಡರ ಕುಟುಂಬವನ್ನು ಮುಂದಿಟ್ಟುಕೊಂಡು ಹಿಂದುತ್ವವನ್ನು ಇಲ್ಲಿನ ಜನರ ಮನಸ್ಸಿನಲ್ಲಿ ತುಂಬುವ ಪ್ರಯತ್ನ ನಡೆದಿದೆ.. ಇದೇ ವೇಳೆ ಹಳೇ ಮೈಸೂರು ಭಾಗದಲ್ಲಿ ಒಬ್ಬ ಪ್ರಬಲ ಹಾಗೂ ಜನ ಗೌರವ ಕೊಡುವಂತಹ ನಾಯಕನನ್ನು ಹುಟ್ಟು ಹಾಕಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಅದರ ಪ್ರತಿಫಲವೇ ಯದುವೀರ್… ಒಡೆಯರ್ ರಾಜ ವಂಶಸ್ಥರಿಗೆ ಈ ಭಾಗದ ಜನ ಜಾತಿ ಮೀರಿ ಗೌರವ ಕೊಡುತ್ತಾರೆ. ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದೇ ಇದರ ಉದ್ದೇಶ..
ಪ್ರತಾಪ ಸಿಂಹ ಯಾಕೆ ನಾಯಕರಾಗಲಿಲ್ಲ;
ಪ್ರತಾಪ ಸಿಂಹ ಅವರು ಹೈಕಮಾಂಡ್ ಗೆ ತುಂಬಾ ಹತ್ತಿರದಲ್ಲಿದ್ದವರು.. ಇವರು ಮನಸ್ಸು ಮಾಡಿದ್ದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ದೊಡ್ಡ ಲೀಡರ್ ಆಗಬಹುದಿತ್ತು.. ಆದ್ರೆ ಪ್ರತಾಪ ಸಿಂಹ ಕೆಲಸ ಮಾಡುವುದರಲ್ಲಿ, ಕೆಲಸ ಮಾಡಿಸಿಕೊಂಡು ಬರುವುದರಲ್ಲೇ ಹೆಚ್ಚು ಮಗ್ನರಾದರು.. ಸಮಯ ಸಿಕ್ಕಾಗ ಸಿದ್ದರಾಮಯ್ಯರನ್ನು ಬೈಯ್ಯುವುದು, ಸ್ವಪಕ್ಷದ ಶಾಸಕರ ಜೊತೆಯೇ ಕಿತ್ತಾಡುವುದು ಮಾಡುತ್ತಿದ್ದರು.. ಇದರಿಂದಾಗಿ ಪ್ರತಾಪ ಸಿಂಹ ಒಳ್ಳೆಯ ಕೆಲಸಗಾರ ಎನಿಸಿಕೊಂಡರೂ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ ನಾಯಕನಾಗಲೇ ಇಲ್ಲ.. ಸದ್ಯಕ್ಕೆ ಬಿಜೆಪಿಗೆ ಒಬ್ಬ ನಾಯಕನ ಹುಟ್ಟು ಹಾಕೋದು ಬೇಕಿದೆ… ಹೀಗಾಗಿ ಒಬ್ಬ ಪಕ್ಷ ನಿಷ್ಠನಿಗೆ, ಕೆಲಸಗಾರನಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ.
ಇವಿಷ್ಠೇ ಅಲ್ಲ, ಪಕ್ಷದಲ್ಲಿರುವ ಕೆಲವರ ಅಡ್ಡಗಾಲು ಕೂಡಾ ಪ್ರತಾಪ ಸಿಂಹಗೆ ಟಿಕೆಟ್ ಕೈತಪ್ಪಲು ಕಾರಣವಾಗುತ್ತಿದೆ.