National

ಸಿಎಎ ಜಾರಿ ಮಾಡಿ ಕೇಂದ್ರದಿಂದ ಅಧಿಸೂಚನೆ

ನವದೆಹಲಿ;ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ. ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಕೇಂದ್ರವು ಅಧಿಸೂಚನೆಯನ್ನು ಜಾರಿಗೆ ತಂದಿದೆ. ಕಾಯ್ದೆ ಸದನದಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ.

ಇತ್ತೀಚೆಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಲೋಕಸಭಾ ಚುನಾವಣೆಗೂ ಮೊದಲು ಸಿಎಎ ಜಾರಿ ಮಾಡುವುದಾಗಿ ಹೇಳಿದ್ದರು. ಅದರಂತೆ ಸಿಎಎ ನಿಯಮಗಳ ಅಧಿಸೂಚನೆಯನ್ನು ಇಂದು ರಾತ್ರಿ ಹೊರಡಿಸುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಮಾತನಾಡಿದ್ದ ಅಮಿತ್‌ ಶಾ ಅವರು, ಸಿಎಎ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಅಲ್ಪಸಂಖ್ಯಾತರಿಗೆ ಯಾವ ಸಮಸ್ಯೆ ಕೂಡಾ ಆಗುವುದಿಲ್ಲ. ಈ ಕಾಯ್ದೆ ಪೌರತ್ವ ನೀಡುವುದೇ ಹೊರತು ಕಿತ್ತುಕೊಳ್ಳುವುದಲ್ಲ. ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಂ ಸಹೋದರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದರು.

ಪ್ರಧಾನಿ ಮೋದಿ ಅವರು ಇಂದು ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಸಿಎಎ ಬಗ್ಗೆ ಉಲ್ಲೇಖಿಸುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ. ಈ ಕಾಯ್ದೆಯಿಂದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್, ಜೈನ ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಪಡೆಯಲು ಕಾನೂನು ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದಿರುವ ಈ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಉದ್ದೇಶವನ್ನು ಈ ಕಾನೂನು ಹೊಂದಿದೆ ಎಂದು ಶಾ ಹೇಳಿದ್ದರು.

 

Share Post