ಶಾಸಕರೂ ಅಲ್ಲ, ಪರಿಷತ್ ಸದಸ್ಯರೂ ಅಲ್ಲ, ಆದ್ರೂ ಮಂತ್ರಿ ಸ್ಥಾನ!; ಯಾರು ಈ ಬೋಸರಾಜು..?
ಬೆಂಗಳೂರು; ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ರಾಯಚೂರು ಮೂಲದ ಎನ್.ಎಸ್.ಬೋಸರಾಜು ಸೇರ್ಪಡೆಯಾಗುತ್ತಿದ್ದಾರೆ. ಇದು ಅಚ್ಚರಿಯ ಆಯ್ಕೆ. ಯಾಕಂದ್ರೆ, ಶಾಸಕರಾಗಿ ಆಯ್ಕೆಯಾದ ಹಿರಿಯರು ಸಾಕಷ್ಟು ಜನ ಇದ್ದರು. ಅವರಿಗೆಲ್ಲಾ ಬಿಟ್ಟು ಶಾಸಕರೂ ಅಲ್ಲ, ಪರಿಷತ್ ಸದಸ್ಯರೂ ಅಲ್ಲದ ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಹೀಗಾಗಿ ಬೋಸರಾಜು ಅವರಿಗೆ ಹೇಗೆ ಸಚಿವಗಿರಿ ಸಿಕ್ತು ಅನ್ನೋದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಹಾಗೆ ನೋಡಿದರೆ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಹೈಕಮಾಂಡ್‌ನಲ್ಲಿ ಪ್ರಭಾವಿ ನಾಯಕ. ಆದ್ರೆ ಅವರಿಗೇ ಸಚಿವ ಸ್ಥಾನ ನಿರಾಕರಿಸಲಾಗಿದೆ. ಆದ್ರೆ ಹೆಚ್ಚು ಜನಕ್ಕೆ ಗೊತ್ತಿಲ್ಲ. ರಾಜ್ಯ ಕಾಂಗ್ರೆಸ್‌ನಲ್ಲಿ ಅಷ್ಟೇನೂ ಗುರುತಿಸಿಕೊಳ್ಳದ ಬೋಸರಾಜು ಸಚಿವ ಸ್ಥಾನ ಪಡೆದುಕೊಂಡಿರುವುದು ಎಲ್ಲರಿಗೂ ಅಚ್ಚರಿ ತರಿಸಿದೆ. ಬೋಸರಾಜು ಕೂಡಾ ಹೈಕಮಾಂಡ್ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಜೊತೆಗೆ ಅವರು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಕೂಡಾ ಆಗಿದ್ದಾರೆ. ಅವರು ರಾಯಚೂರು ನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದ್ರೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದ್ರೆ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಜಾಕ್‌ಪಾಟ್ ಹೊಡೆದಿದೆ.
ಅಂದಹಾಗೆ, ಬೋಸರಾಜು ಅವರು ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಅಸ್ಲಂಪಾಶಾ ಮುಂತಾದವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿದ್ದರು. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದರು. ಆದ್ರೆ ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಹೈಕಮಾಂಡ್, ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಿದೆ.
ಬೋಸರಾಜು ಅವರು 1999 ಹಾಗೂ 2004ರಲ್ಲಿ ಮಾನ್ವಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ 2014ರಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು. ಈಗ ಎಐಸಿಸಿ ಕಾರ್ಯದರ್ಶಿಯಾಗಿರುವ ಬೋಸರಾಜುಗೆ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಯನ್ನು ಕೂಡಾ ನೀಡಲಾಗಿತ್ತು. 1972ರಿಂದ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಬೋಸರಾಜು ಅವರು ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅಷ್ಟೇ ಅಲ್ಲದೆ ಬಂಗಾರಪ್ಪ ಸಿಎಂ ಆಗಿದ್ದಾಗ, ಹಾಗೂ ವೀರಪ್ಪಮೊಯ್ಲಿ ಅವಧಿಯಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿದ್ದರು. ಎಸ್.ಎಂ.ಕೃಷ್ಣಾ ಅವಧಿಯಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಧರಂ ಸಿಂಗ್ ಅವಧಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಎಸ್.ಬೋಸರಾಜು ಸೇವೆ ಸಲ್ಲಿಸಿದ್ದಾರೆ.