ಶಿವಮೊಗ್ಗ ಲೋಕಸಭಾ; BSY ವಿರುದ್ಧ ʻಈಶಾʼಸ್ತ್ರ ಪ್ರಯೋಗ, ಗೀತಾಗೆ ʻಕುಮಾರʼದೆಸೆ
ಶಿವಮೊಗ್ಗ; ಶುಕ್ರವಾರದವರೆಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಒನ್ ಸೈಡೆಡ್ ಎಂದೇ ಹೇಳಲಾಗುತ್ತಿದೆ.. ಆದ್ರೆ ಈಗ ಅಲ್ಲಿ ಚುನಾವಣಾ ಕಣ ಬದಲಾಗಿದೆ.. ಗೀತಾ ಶಿವರಾಜ್‌ಕುಮಾರ್‌ಗೆ ಶುಕ್ರವಾರದಿಂದ ಶುಕ್ರದೆಸೆ ಶುರುವಾದಂತೆ ಕಾಣುತ್ತಿದೆ.. ಯಡಿಯೂರಪ್ಪ ವಿರುದ್ಧ ಕೇಸು, ಮಾಜಿ ಸಿಎಂ ಕುಟುಂಬಕ್ಕೆ ಈಶ್ವರಪ್ಪ ಹಾಕಿದ ಬಂಡಾಯದ ಏಟು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆಸೆ ಚಿಗುರುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.. ಕಾಂಗ್ರೆಸ್ ಪಕ್ಷ ಗೀತಾ ಶಿವರಾಜ್ ಕುಮಾರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅತ್ಯಂತ ಸುಲಭವಾಗಿ ಹಾಗೂ ಭಾರಿ ಅಂತರದಿಂದ ಗೆಲ್ಲುತ್ತಾರೆ ಎಂದೇ ಎಲ್ಲರೂ ಮಾತನಾಡಿಕೊಂಡಿದ್ದರು.. ಆದ್ರೆ, ಲೆಕ್ಕಾಚಾರಗಳು ಈಗ ಸಾಕಷ್ಟು ಬದಲಾಗಿವೆ.. ಮುಂದೆ ನಡೆಯುವ ಪೊಲಿಟಿಕಲ್ ಗೇಮ್‌ಗಳು ಇನ್ನೂ ಯಾವ ಹಂತಕ್ಕೆ ತಂದು ನಿಲ್ಲಿಸುತ್ತವೋ ಗೊತ್ತಿಲ್ಲ…
ಇದನ್ನೂ ಓದಿ; Loksabha Election Date; ಮಧ್ಯಾಹ್ನ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ನೀತಿ ಸಂಹಿತೆ!
ಈಶ್ವರಪ್ಪ ನಿಜವಾಗ್ಲೂ ಬಂಡಾಯ ಅಭ್ಯರ್ಥಿಯಾಗ್ತಾರಾ..?
ರಾಜ್ಯದಲ್ಲಿ ಬಿಜೆಪಿ ಕಟ್ಟಿದವರಲ್ಲಿ ಪ್ರಮುಖರು ಯಡಿಯೂರಪ್ಪ ಹಾಗೂ ಈಶ್ವರಪ್ಪ.. ಇವರಿಬ್ಬರೂ ಜೀರೋ ಇಂದ ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ… ಆದ್ರೆ, ಯಡಿಯೂರಪ್ಪ ಅವರ ಕುಟುಂಬ ಬೇಕಂತಲೇ ನಮ್ಮನ್ನು ಮೂಲೆಗುಂಪು ಮಾಡುತ್ತಿದೆ ಎಂದು ಈಶ್ವರಪ್ಪ ತುಂಬಾನೇ ಗರಂ ಆಗಿದ್ದಾರೆ.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಅದಕ್ಕೂ ಮುಂಚೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಕೇಸ್‌ನಲ್ಲಿ ಸಚಿವ ಸ್ಥಾನದಿಂದ ರಾಜೀನಾಮೆ ಪಡೆಯಲಾಯಿತು.. ಆ ಕೇಸ್‌ನಲ್ಲಿ ಕ್ಲೀನ್ ಚಿಟ್ ಸಿಕ್ಕರೂ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ.. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್ ಕೇಳಿದರೂ ಕೊಡಲಿಲ್ಲ.. ಇದೀಗ ಈಶ್ವರಪ್ಪ ಅವರೇ ಹೇಳುವ ಪ್ರಕಾರ, ಹಾವೇರಿ ಕ್ಷೇತ್ರಕ್ಕೆ ಕಾಂತೇಶ್‌ಗೆ ಟಿಕೆಟ್ ಕೊಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರಂತೆ.. ಆದ್ರೆ ಈಗಲೂ ಟಿಕೆಟ್ ಕೈತಪ್ಪಿದೆ.. ಆ ಕ್ಷೇತ್ರದ ಟಿಕೆಟ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪಾಲಾಗಿದೆ.. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಫುಲ್ ಗರಂ ಆಗಿದ್ದಾರೆ. ಮಾರ್ಚ್ 15ರಂದು ಶಿವಮೊಗ್ಗದಲ್ಲಿ ಸಭೆ ನಡೆಸಿ, ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಘೋಷಿಸಿದ್ದಾರೆ.. ಅವರ ಈ ನಿರ್ಧಾರ ನೋಡಿದರೆ ಕಠಿಣ ನಿರ್ಧಾರ ತೆಗೆದುಕೊಂಡೇ ಬಂದಂತಿದೆ.. ಹೇಗಾದರೂ ಮಾಡಿ ಯಡಿಯೂರಪ್ಪ ಮಗನಿಗೆ ಸೋಲುಣಿಸಬೇಕು.. ಆ ಮೂಲಕ ಸೇಡು ತೀರಿಸಿಕೊಳ್ಳಬೇಕು ಅನ್ನೋ ತವಕ ಈಶ್ವರಪ್ಪ ಅವರದ್ದು… ಈಶ್ವರಪ್ಪ ಅವರು ಇದೇ ನಿರ್ಧಾರದಲ್ಲಿ ಮುಂದುವರೆದರೆ, ಬಿಜೆಪಿಗೆ ಸಾಕಷ್ಟು ಹೊಡೆತ ಬೀಳುವುದು ಗ್ಯಾರೆಂಟಿ…
ಇದನ್ನೂ ಓದಿ; ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಪ್ರಧಾನಿ ಮೋದಿ ಹವಾ; ಇಂದು ಬೃಹತ್ ಸಮಾವೇಶ
ಕುಮಾರ್ ಬಂಗಾರಪ್ಪ ಮೌನದ ಹಿಂದಿನ ಗುಟ್ಟೇನು..?
ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕುಮಾರ ಬಂಗಾರಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಸೈಲೆಂಟ್ ಆಗಿದ್ದಾರೆ… ರಾಜಕೀಯವಾಗಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ.. ಈ ನಡುವೆ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ನಡೆದಿದೆ ಎಂದೂ ಸುದ್ದಿಯಾಗಿತ್ತು.. ಇನ್ನು ಗೀತಾ ಶಿವರಾಜ್‌ಕುಮಾರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಳಿಕ ಕುಮಾರ್ ಬಂಗಾರಪ್ಪ ಅವರು, ಹಳೆಯ ಫೋಟೋವೊಂದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದರು.. ಆ ಫೋಟೋದಲ್ಲಿ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ ಡೊಳ್ಳು ಬಾರಿಸುತ್ತಿರುವ ದೃಶ್ಯವಿತ್ತು… ಹೀಗಾಗಿ ಬಂಗಾರಪ್ಪ ಅವರ ಕುಟುಂಬ ಒಂದಾಗುತ್ತಿರುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ… ಅದಕ್ಕೆ ಪುಷ್ಠಿ ಎಂಬಂತೆ ಕುಮಾರ್ ಬಂಗಾರಪ್ಪ ಸೈಲೆಂಟ್ ಆಗಿದ್ದಾರೆ.. ಅವರ ನಿರ್ಧಾರ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ.. ಒಂದು ವೇಳೆ ಕುಮಾರ್ ಬಂಗಾರಪ್ಪ ಯಾರ ಪರವೂ ಪ್ರಚಾರ ಮಾಡದೇ ಸೈಲೆಂಟ್ ಆಗಿದ್ದರೂ, ಅಥವಾ ಸಹೋದರಿ ಗೀತಾ ಶಿವರಾಜ್‌ಕುಮಾರ್ ಪರ ಪ್ರಚಾರಕ್ಕೆ ಬಂದು ಒಗ್ಗಟ್ಟು ಪ್ರದರ್ಶನ ಮಾಡಿದರೂ ಗೀತಾ ಶಿವರಾಜ್‌ಕುಮಾರ್‌ಗೆ ದೊಡ್ಡ ಬಲ ಬಂದಂತಾಗುತ್ತದೆ..
ಇದನ್ನೂ ಓದಿ; Mysore Loksabha; ಮೈಸೂರಲ್ಲಿ ಯತೀಂದ್ರ-ಯದುವೀರ ಯುದ್ಧ ಫಿಕ್ಸ್!
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಲಾಬಲ ಏನು..?;
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.. ಶಿವಮೊಗ್ಗ ಗ್ರಾಮೀಣ, ಶಿವಮೊಗ್ಗ ನಗರ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಸಾಗರ ಹಾಗೂ ಬೈಂದೂರು ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಒಟ್ಟು 16,76,668 ಮತದಾರರು ಇದ್ದಾರೆ. ಕಳೆದ ಚುನಾವಣೆಯಲ್ಲಿ ಒಟ್ಟು 12,83,577 ಮತದಾರರಿದ್ದು, 2019ರಲ್ಲಿ ಶೇ. 76.56% ರಷ್ಟು ಮತದಾನ ನಡೆದಿತ್ತು.
ಇದನ್ನೂ ಓದಿ; ಯಡಿಯೂರಪ್ಪ ಪುತ್ರನ ವಿರುದ್ಧ ಈಶ್ವರಪ್ಪ ಸ್ಪರ್ಧೆ; ಘೋಷಣೆ
ಈಡಿಗ ಹಾಗೂ ಲಿಂಗಾಯತ ಮತಗಳು ಪ್ರಾಬಲ್ಯ;
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಡಿಗ ಹಾಗೂ ಲಿಂಗಾಯತ ಮತಗಳು ಹೆಚ್ಚಿವೆ. ಇದರ ಜೊತೆಗೆ ಮುಸ್ಲಿಂ ಇತರೆ ಹಿಂದುಳಿದ ಹಾಗೂ ದಲಿತ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇಲ್ಲಿ ಜಾತಿ ರಾಜಕಾರಣ ಸಾಕಷ್ಟು ಕೆಲಸ ಮಾಡುತ್ತದೆ.. ಇನ್ನು ಮಧು ಬಂಗಾರಪ್ಪ ಅವರು ಸಚಿವರಾಗಿದ್ದಾರೆ.. ಹೇಗಾದರೂ ಮಾಡಿ, ಯಡಿಯೂರಪ್ಪ ಪುತ್ರನನ್ನು ಸೋಲಿಸಬೇಕೆಂದು ಕಂಕಣ ತೊಟ್ಟಿದ್ದಾರೆ.. ಒಮ್ಮೊಮ್ಮೆ ಕಾರಣವೇ ಇಲ್ಲದೇ ಹಲವರು ಸೋತ ಉದಾಹರಣೆ ಇದೆ… ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಸೋಲೋದಕ್ಕೆ ಕಾರಣಗಳು ತುಂಬಾ ಕಡಿಮೆ ಇದ್ದವು.. ಕುಮಾರ್ ಬಂಗಾರಪ್ಪ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಮಧು ಬಂಗಾರಪ್ಪ ಅವರಿಗೆ ಜನ ಮಣೆ ಹಾಕಿದ್ದರು.. ಸೊರಬ, ಸಾಗರದಲ್ಲಿರುವ ಈಡಿಗರು (ದೀವರು, ಬಿಲ್ಲವ, ನಾಮಧಾರಿ) ಒಂದಾದರೆ ಗೀತಾ ಶಿವರಾಜ್‌ಕುಮಾರ್‌ಗೆ ಬಲ ಬರುತ್ತದೆ.. ಕುಮಾರ್ ಬಂಗಾರಪ್ಪ ಹಾಗೂ ಹರತಾಳು ಹಾಲಪ್ಪ ಕೊಂಚ ಗೀತಾ ಶಿವರಾಜ್ ಕುಮಾರ್‌ಗೆ ಸಹಕರಿಸಿದರೆ ಈಡಿಗ ಮತಗಳನ್ನು ಪೂರ್ತಿಯಾಗಿ ಗೀತಾ ಶಿವರಾಜ್‌ಕುಮಾರ್ ಸೆಳೆಯಬಹುದು..
ಇದನ್ನೂ ಓದಿ; Bommai; ಪಕ್ಷ ಎಲ್ಲ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿದೆ; ಬಸವರಾಜ ಬೊಮ್ಮಾಯಿ
ಈಡಿಗ, ಮುಸ್ಲಿಂ, ಬಂಜಾರ, ಕುರುಬ, ದಲಿತರು ಒಂದಾದರೆ ಫೈಟ್;
ಶಿವಮೊಗ್ಗ ನಗರ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಲಿವೆ, ಶಿಕಾರಿಪುರದ ಸುತ್ತಮುತ್ತ ಪ್ರಾಬಲ್ಯವಿರುವ ಬಂಜಾರ ಮತಗಳು, ಸೊರಬ, ಸಾಗರದಲ್ಲಿ ದೊಡ್ಡ ಮಟ್ಟದಲ್ಲಿರುವ ಈಡಿಗ ಮತಗಳು, ಶಿವಮೊಗ್ಗ ನಗರ ಸುತ್ತಮುತ್ತ ಇರುವ ಕುರುಬ ಮತಗಳು ಹಾಗೂ ಒಟ್ಟಾರೆ ದಲಿತ ಮತಗಳು ಒಂದಾದರೆ ಗೀತಾ ಶಿವರಾಜ್‌ಕುಮಾರ್ ಲಾಟರಿ ಹೊಡೆದಂತೆಯೇ ಲೆಕ್ಕ. ಒಂದು ವೇಳೆ ಈಶ್ವರಪ್ಪ ಅವರು ಬಂಡಾಯವಾಗಿ ನಿಂತು, ಬಿಜೆಪಿಗೆ ಬೀಳುವ ಒಂದಷ್ಟು ಕುರುಬ ಹಾಗೂ ಇತರೆ ಹಿಂದೂ ಮತಗಳನ್ನು ಸೆಳೆದರೂ ಅದು ಗೀತಾಗೆ ವರ್ಕೌಟ್ ಆಗಬಹುದು.
ಇದನ್ನೂ ಓದಿ; ಡಿಕೆ ಬ್ರದರ್ಸ್ ನಿದ್ದೆಗೆಡಿಸಿದ ಡಾ.ಮಂಜುನಾಥ್; ಶಾಸಕರ ಸಭೆ ನಡೆಸಿ ಬಿಸಿಬಿಸಿ ಚರ್ಚೆ!
ಯಡಿಯೂರಪ್ಪಗೆ ಮೊದಲು ಸೋಲುಣಿಸಿದ್ದ ಬಂಗಾರಪ್ಪ;
ಮಾಜಿ ಸಿಎಂ ಯಡಿಯೂರಪ್ಪ ಅವರು ಇದುವರೆಗೆ ಒಂದೇ ಒಂದು ಬಾರಿ ಸೋತಿರೋದು.. ಆ ಸೋಲುಣಿಸಿದ್ದು ಕೂಡಾ ಬಂಗಾರಪ್ಪ ಅವರ ಕುಟುಂಬ.. 1991ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಸ್ಪರ್ಧಿಸಿದ್ದರು. ಈ ವೇಳೆ ಮುಖ್ಯಮಂತ್ರಿಯಾಗಿ ಬಂಗಾರಪ್ಪ ಅವರು, ಯಡಿಯೂರಪ್ಪ ಅವರ ಎದುರಾಳಿಯಾಗಿ, ತಮ್ಮ ಪತ್ನಿಯ ಸಹೋದರಿಯ ಗಂಡ ಕೆ.ಜಿ.ಶಿವಪ್ಪ ಅವರನ್ನು ಅಖಾಡಕ್ಕಿಳಿಸಿದ್ದರು.. ತಾನೇ ಸ್ಪರ್ಧಿಸಿದ್ದೇನೆ ಎಂಬಂತೆ ಬಂಗಾರಪ್ಪ ಓಡಾಡಿದ್ದರು. ಈ ಕಾರಣಕ್ಕಾಗಿ ಯಡಿಯೂರಪ್ಪ 40 ಸಾವಿರ ಮತಗಳ ಅಂತರದಿಂದ ಸೋಲಬೇಕಾಯಿತು. ಅನಂತರ ನಡೆದ ಐದು ಚುನಾವಣೆಗಳಲ್ಲಿ ಬಂಗಾರಪ್ಪ ಅವರ ಕುಟುಂಬವನ್ನು ಯಡಿಯೂರಪ್ಪ ಕುಟುಂಬ ಸೋಲಿಸಿದೆ.
ಇದನ್ನೂ ಓದಿ; BSY ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ!
ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಗೀತಾಗೆ ಮೂರನೇ ಸ್ಥಾನ;
2013 ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಶಿವಮೊಗ್ಗದಿಂದ ಲೋಕಸಭಾ ಅಖಾಡಕ್ಕಿಳಿದಿದ್ದಾಗ, ಜೆಡಿಎಸ್‌ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ದರು. ಗೀತಾ ಪತಿ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೂಡಾ ಪ್ರಚಾರದ ಅಖಾಡಕ್ಕಿಳಿದಿದ್ದರು. ಆದರೂ ಗೀತಾ ಶಿವರಾಜ್ ಕುಮಾರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅನಂತರ ಎರಡು ಬಾರಿ ಮಧು ಬಂಗಾರಪ್ಪ ಅವರು ರಾಘವೇಂದ್ರ ವಿರುದ್ಧ ಸೋತರು. ಈ ಹಿಂದೆ ಬಂಗಾರಪ್ಪ ಅವರು ಕೂಡಾ ರಾಘವೇಂದ್ರ ವಿರುದ್ಧ ಸೋತಿದ್ದರು.
2014ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್‌ಕುಮಾರ್ ಅವರು ಯಡಿಯೂರಪ್ಪ ಅವರ ವಿರುದ್ಧ 3.6 ಲಕ್ಷ ಮತಗಳ ಅಂತರದಿಂದ ಸೋಲುಂಡರು. ಈ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ 6.06 ಲಕ್ಷ ಮತ ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಂಜುನಾಥ ಭಂಡಾರಿ ಅವರು 2.42 ಲಕ್ಷ ಮತ ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಗೀತಾ ಶಿವರಾಜ್‌ಕುಮಾರ್ ಗಳಿಸಿದ್ದ ಕೇವಲ 2.40 ಲಕ್ಷ ಮತಗಳು ಮಾತ್ರ.
ಇದನ್ನೂ ಓದಿ; ಚುನಾವಣಾ ಬಾಂಡ್ ಮೂಲಕ ದೇಣಿಗೆ; ಯಾವ ಪಕ್ಷಕ್ಕೆ ಎಷ್ಟು ಕೋಟಿ ಸಿಕ್ತು ಗೊತ್ತಾ..?
ಕಳೆದ ಚುನಾವಣೆ ಫಲಿತಾಂಶ ಹೇಗಿತ್ತು..?;
2019ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ನೋಡೋದಾದರೆ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 7,29,872 ಮತ ಪಡೆದು ಗೆದ್ದಿದ್ದರು. ಇವರ ಎದುರಾಳಿಯಾಗಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಮಧು ಬಂಗಾರಪ್ಪಕೇವಲ 5,06,512 ಮತಗಳು ಮಾತ್ರ ಪಡೆದಿದ್ದರು. ಆಗ ಕಾಂಗ್ರೆಸ್ ಕೂಡಾ ಮಧು ಬಂಗಾರಪ್ಪಗೆ ಬೆಂಬಲ ನೀಡಿತ್ತು. ಇದಕ್ಕೂ ಮೊದಲು ನಡೆದ ಉಪಚುನಾವಣೆಯಲ್ಲಿ ಇದೇ ಮಧು ಬಂಗಾರಪ್ಪ ಕೇವಲ 50 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರಾದರೂ, ರಾಘವೇಂದ್ರ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಸದ್ಯ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಸಚಿವರಾಗಿದ್ದಾರೆ.
ಇದನ್ನೂ ಓದಿ; ಬಹುತೇಕ ಇವರಿಗೇ ಕಾಂಗ್ರೆಸ್ ಟಿಕೆಟ್ ಫೈನಲ್; 21 ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಟಿಕೆಟ್..?