Politics

ವಿಧಾನಸೌಧದ ಬಳಿ ಪಾಕ್‌ ಪರ ಘೋಷಣೆ ಕೂಗಿದ್ರಾ..?; ಅಲ್ಲಿ ನಡೆದಿದ್ದಾರೂ ಏನು..?

ಬೆಂಗಳೂರು; ನಿನ್ನೆ ರಾಜ್ಯದಿಂದ ಆಯ್ಕೆಯಾಗುವ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಅಖಾಡಕ್ಕಿಳಿದಿದ್ದ ಮೂವರೂ ಅಭ್ಯರ್ಥಿಗಳೂ ಪ್ರಚಂಡ ಗೆಲುವು ಸಾಧಿಸಿದರು. ಈ ವೇಳೆ ನಡೆದ ಸಂಭ್ರಮಾಚರಣೆ ವೇಳೆ ವಿಧಾನಸೌಧದ ಆವರಣದಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಎಂಬ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.. ಈ ಸಂಬಂಧ ವಿಧಾನಸೌಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜೇತ ಅಭ್ಯರ್ಥಿ ನಾಸೀರ್‌ ಹುಸೇನ್‌ ಬೆಂಬಲಿಗರ ವಿರುದ್ಧ ಆರೋಪ;

ವಿಜೇತ ಅಭ್ಯರ್ಥಿ ನಾಸೀರ್‌ ಹುಸೇನ್‌ ಬೆಂಬಲಿಗರ ವಿರುದ್ಧ ಆರೋಪ;  ಕಾಂಗ್ರೆಸ್‌ನಿಂದ ಅಜಯ್‌ ಮಾಕೇನ್‌, ಜಿ.ಸಿ.ಚಂದ್ರಶೇಖರ್‌ ಹಾಗೂ ನಾಸೀರ್‌ ಹುಸೇನ್‌ ಅವರು ಜಯಶಾಲಿಯಾಗಿದ್ದಾರೆ. ನಾಸೀರ್‌ ಹುಸೇನ್‌ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಇದರಲ್ಲಿ ಒಬ್ಬ ವ್ಯಕ್ತಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಜೊತೆ ಬಂದವರ ಪಟ್ಟಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಟೆಕ್ನಿಕಲ್ ಅನಾಲಿಸಿಸ್ ಹಾಗೂ ವಿಡಿಯೋಗಳನ್ನು ಪರಿಶೀಲಿಸುವ ಕಾರ್ಯ ಕೂಡಾ ನಡೆಯುತ್ತಿದೆ. ಘೋಷಣೆ ಕೂಗಿದ ವ್ಯಕ್ತಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ತನಿಖೆಗೆ ಮೂರು ವಿಶೇಷ ತಂಡಗಳ ರಚನೆ;

ತನಿಖೆಗೆ ಮೂರು ವಿಶೇಷ ತಂಡಗಳ ರಚನೆ; ಸರ್ಕಾರ ಹಾಗೂ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸತ್ಯಾಸತ್ಯತೆ ತನಿಖೆ ನಡೆಸಲು ಮೂರು ವಿಶೇಷ ಪೊಲೀಸ್‌ ತಂಡಗಳನ್ನು ರಚನೆ ಮಾಡಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿಜೇತ ಅಭ್ಯರ್ಥಿ ನಾಸೀರ್‌ ಹುಸೇನ್‌ ಜೊತೆ ಗುರುತಿಸಿಕೊಂಡಿದ್ದ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕೂಡಾ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕಾಲಕಾಲಕ್ಕೆ ಪ್ರಕರಣದ ಬಗ್ಗೆ ಪೊಲೀಸರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಹೊರಗೆ  ತರಬೇಕೆಂದು ಪೊಲೀಸರಿಗೆ ಖಡಕ್‌ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪೊಲೀಸರು ವಿಧಾನಸೌಧದ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಿಂದ ವಿಡಿಯೋಗಳನ್ನು ಸಂಗ್ರಹಿಸಿದ್ದು, ಅದರ ಮೂಲಕ ಆರೋಪಿಯನ್ನು ಹುಡುಕು ಪ್ರಯತ್ನದಲ್ಲಿದ್ದಾರೆ. ಜೊತೆಗೆ ವಿಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ.

ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ;

ಬಿಜೆಪಿಯಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ಇದರ ವಿರುದ್ಧ ರಾತ್ರಿಯೇ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರು, ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

ವಿಜೇತ ಅಭ್ಯರ್ಥಿ ನಾಸೀರ್‌ ಹುಸೇನ್‌ ಸ್ಪಷ್ಟನೆ;

ವಿಜೇತ ಅಭ್ಯರ್ಥಿ ನಾಸೀರ್‌ ಹುಸೇನ್‌ ಸ್ಪಷ್ಟನೆ; ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಸ್ಪಷ್ಟನೆ ನೀಡಿದ್ದಾರೆ. ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನನಗೆ ಕೇಳಿಸಿಯೇ ಇಲ್ಲ. ಒಂದು ವೇಳೆ ಯಾರಾದರೂ ಆ ರೀತಿ ಘೋಷಣೆ ಕೂಗಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಸ್ಪಷ್ಟನೆ ಕೊಟ್ಟು ಅವರು ಒಂದು ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ.

 

 

Share Post