ರಾಜ್ಯದಲ್ಲಿ ಒಕ್ಕಲಿಗ ವರ್ಸಸ್ ಒಕ್ಕಲಿಗ; ಗೌಡರಿಗೆ ಡಿಕೆಶಿ ಬ್ರಹ್ಮಾಸ್ತ್ರದ ಭೀತಿ..!
ಬೆಂಗಳೂರು; ಸೋಮವಾರ ಕೆಂಪೇಗೌಡರ ಜಯಂತಿ ಇತ್ತು. ಈ ಕಾರ್ಯಕ್ರಮದಲ್ಲಿ ಒಕ್ಕಲಿಗ ಘಟಾನುಘಟಿ ನಾಯಕರೆಲ್ಲಾ ಪಾಲ್ಗೊಂಡಿದ್ದರು. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಕೇಂದ್ರ ಸಚಿವ ಸದಾನಂದಗೌಡ ಹಾಗೂ ಒಕ್ಕಲಿಗ ಸ್ವಾಮೀಜಿ ನಿರ್ಮಲಾನಂದ ಶ್ರೀಗಳು ವೇದಿಕೆಯಲ್ಲಿದ್ದರು. ಈ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತು ಆರಂಭಿಸುತ್ತಿದ್ದಂತೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಯ್ತು. ಸೇರಿದ್ದ ಜನರೆಲ್ಲಾ ಡಿ.ಕೆ.ಶಿವಕುಮಾರ್ ಭಾಷಣ ಆರಂಭಿಸುತ್ತಿದ್ದಂತೆ ಕೇಕೆ, ಚಪ್ಪಾಳೆಗಳ ಮೂಲಕ ಬೆಂಬಲ ಸೂಚಿಸಿದರು. ಇದು ಡಿ.ಕೆ.ಶಿವಕುಮಾರ್ ಅವರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತಿತ್ತು. ಇನ್ನು ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ ಬೆಂಗಳೂರನ್ನು ಕಟ್ಟಿದ್ದು, ಬೆಳೆಸಿದ್ದು ಮೂರು ʻಕೆʼ ಗಳು ಎಂದು ಹೇಳಿದರು. ಕೆಂಗಲ್ ಹನುಮಂತಯ್ಯ, ಕೆಂಪೇಗೌಡ ಹಾಗೂ ಎಸ್.ಎಂ.ಕೃಷ್ಣ ಅವರಿಂದಾಗಿ ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದರು. ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಕ್ಕ ಜನಬೆಂಬಲ ಹಾಗೂ ಅವರ ಭಾಷಣದಿಂದಾಗಿ ಗೌಡರ ಕುಟುಂಬ ಕಣ್ಣು ಕೆಂಪಗಾಗುವಂತೆ ಮಾಡಿತ್ತು.
ಕರ್ನಾಟಕದಲ್ಲಿ ಒಕ್ಕಲಿಗ ರಾಜಕೀಯ ಬಲ್ಲವರಿಗೆ ಡಿ.ಕೆ.ಶಿವಕುಮಾರ್ ಬಗ್ಗೆ ಗೊತ್ತೇ ಇರುತ್ತೆ. ಅದು 2018ರ ಸಮಯ. ಆಗ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಂದಿರಲಿಲ್ಲ. ಎಂಟು ಸೀಟುಗಳು ಕಡಿಮೆ ಹೊಂದಿದ್ದ ಬಿಜೆಪಿ ಸರ್ಕಾರ ರಚನೆಯ ಹಕ್ಕು ಮಂಡಿಸಿ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದ್ರೆ ಅವರಿಗೆ ಬಹುಮತ ಸಾಬೀತುಪಡಿಸಲು ಆಗುವುದಿಲ್ಲ ಎಂದು ಗೊತ್ತಾಗಿ ನಾಲ್ಕೈದು ದಿನದಲ್ಲೇ ಅಧಿಕಾರದಿಂದ ಕೆಳಗೆ ಇಳಿಯಬೇಕಾಯಿತು. ಅಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದ್ದವು. ಅಸಾಧ್ಯವಾದುದನ್ನು ಅಂದು ಸಾಧಿಸಲಾಯಿತು. ಕುಮಾರಸ್ವಾಮಿಯವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವೇಳೆ ಮಮತಾ ಬ್ಯಾನರ್ಜಿಯಿಂದ ಮಾಯಾವತಿಯವರೆಗೆ, ಸೋನಿಯಾಗಾಂಧಿಯಿಂದ ಸ್ಟಾಲಿನ್‌ವರೆಗೆ, ಶರದ್ ಪವಾರ್‌ರಿಂದ ಹಿಡಿದು ಕೆಸಿಆರ್‌ವರೆಗೆ, ಅರವಿಂದ್ ಕೇಜ್ರಿವಾಲ್‌ರಿಂದ ಹಿಡಿದು ಕಮಲ್ ಹಾಸನ್ ವರೆಗೆ ಬಿಜೆಪಿಯೇತರ ಬಹುತೇಕ ನಾಯಕರು ಆ ವೇದಿಕೆಯಲ್ಲಿದ್ದರು. ಆ ವೇದಿಕೆಯ ಚಿತ್ರಣ ಬಿಜೆಪಿಯನ್ನು ಸೋಲಿಸಲು ದೇಶದಲ್ಲಿ ಅಸಾಧಾರಣ ಶಕ್ತಿಯೊಂದು ಒಂದಾಗಿದೆ ಎಂಬ ಸಂದೇಶ ರವಾನಿಸಿತ್ತು. ಆದ್ರೆ 2019ರ ಲೋಕಸಭಾ ಚುನಾವಣೆ ಆ ಆಶಾಭಾವನೆಯ ಕನಸನ್ನೇ ನುಚ್ಚುನೂರು ಮಾಡಿತ್ತು.
ಆದ್ರೆ 2018ರಲ್ಲಿ ಬದ್ಧವೈರಿಗಳಿಬ್ಬರು ಕೈಜೋಡಿಸಿದ್ದರು. ಸಂಖ್ಯಾಬಲದ ಆಟದಲ್ಲಿ ಬಿಜೆಪಿಯನ್ನು ಸೋಲಿಸಿದ್ದು ಒಕ್ಕಲಿಗ ನಾಯಕರಾದ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರು. ಇವರಿಬ್ಬರು ಆಟದಲ್ಲಿ ಲಿಂಗಾಯತ ನಾಯಕ ಯಡಿಯೂರಪ್ಪ ಹಾಗೂ ಕುರುಬ ನಾಯಕ ಸಿದ್ದರಾಮಯ್ಯ ಹಿನ್ನಡೆ ಅನುಭವಿಸುವಂತಾಯ್ತು.
ಈ ನಾಲ್ಕು ವರ್ಷ ಕಳೆದಿದೆ. ಮೂವರು ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಈಗ ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನದಲ್ಲಿ ಕುಳಿತಿದ್ದಾರೆ. ಈಗ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಂದಾಗಿದ್ದ ಅದೇ ಒಕ್ಕಲಿಗ ನಾಯಕರು ಈಗ ಪೈಪೋಟಿಗಳಿದಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಈಗ ಮತ್ತೆ ಬದ್ಧ ವೈರಿಗಳಾಗಿದ್ದಾರೆ.
ದಶಕಗಳಿಂದ ಒಕ್ಕಲಿಗರ ರಾಜಕೀಯ ಅಂದ್ರೆ ಅದು ದೇವೇಗೌಡರ ಮನೆತನ. ದೇವೇಗೌಡರು ಹಾಗೂ ಅವರ ಮನೆತನ ಒಕ್ಕಲಿಗರ ಮೊದಲ ರಾಜಕೀಯ ಕುಟುಂಬ. ಎಸ್.ಎಂ.ಕೃಷ್ಣ ಅವರು ದೇವೇಗೌಡರ ಸಮಕಾಲೀನರು. ಅವರು ಮಂಡ್ಯ ಹೃದಯಭಾಗದ ಒಕ್ಕಲಿಗ ನಾಯಕರು. ಇವರಿಬ್ಬರ ನಡುವೆ ಪೈಪೋಟಿ ಇತ್ತು. ಈಗ ಎರಡನೇ ತಲೆಮಾರು ಎಂದರೆ ಡಿ.ಕೆ.ಶಿವಕುಮಾರ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ. ಕುಮಾರಸ್ವಾಮಿಯವರು ಎಚ್.ಡಿ.ದೇವೇಗೌಡರ ಮಗ, ಡಿ.ಕೆ.ಶಿವಕುಮಾರ್ ಅವರು ಎಸ್.ಎಂ.ಕೃಷ್ಣ ಅವರ ಪರಮ ಶಿಷ್ಯರು. ಅಷ್ಟೇ ಅಲ್ಲ, ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮಾರ್ಥ್ಯ ಅವರಿಗೆ ತಮ್ಮ ಮಗಳನ್ನು ಕೊಟ್ಟು ಈಗ ಬೀಗರೂ ಆಗಿದ್ದಾರೆ.
ವಂಶಾಡಳಿತದ ರಾಜಕೀಯದ ಕಾರಣದಿಂದಾಗಿ ಜೆಡಿಎಸ್ ವಿಶೇಷವಾಗಿ ತಮ್ಮ ಭದ್ರಕೋಟೆಯಾದ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾಲಕ್ರಮೇಣ ಜನ ಬೆಂಬಲವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. 2019ರ ಲೋಕಸಭೆಯಲ್ಲಿ ಆಗಿನ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತಿರುವುದು ಇದಕ್ಕೆ ನಿದರ್ಶನ. ಮಂಡ್ಯದ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದರೂ, ನಿಖಲ್‌ರನ್ನು ಗೆಲ್ಲಿಸಿಕೊಳ್ಳೋದಕ್ಕೆ ಆಗಲಿಲ್ಲ. ಅಂದಿನಿಂದ ಡಿ.ಕೆ.ಶಿವಕುಮಾರ್ ಅವರು ಪ್ರಾಬಲ್ಯ ಹೆಚ್ಚಾಗುತ್ತಿದೆ. ಒಕ್ಕಲಿಗ ಸಮುದಾಯದಲ್ಲೂ ಡಿ.ಕೆ.ಶಿವಕುಮಾರ್ ದೊಡ್ಡ ನಾಯಕರಾಗಿ ಬೆಳೆಯುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಜೈಲುವಾಸ ಅನುಭವಿಸಿದ್ದು ಅವರಿಗೆ ಅನುಕೂಲವೇ ಆಯಿತು. ಬಿಜೆಪಿಗೆ ಇದರಿಂದಾಗಿ ಹಿನ್ನಡೆಯಾದಂತಾಯಿತು. ಇನ್ನು ಸಿದ್ದರಾಮಯ್ಯ ಬಣದ ವಿರೋಧದ ನಡುವೆಯೂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದರು. ಗೌಡರು ಡಿ.ಕೆ.ಶಿವಕುಮಾರ್ ಕಂಡ್ರೆ ಈಗ ಉರಿದುಬೀಳುತ್ತಿದ್ದಾರೆ. ಯಾಕೆಂದ್ರೆ ಡಿ.ಕೆ.ಶಿವಕುಮಾರ್ ಸಾಮರ್ಥ್ಯ ಏನು ಎಂಬುದು ಅವರಿಗೆ ಗೊತ್ತಿದೆ. ಅವರ ಸಂಘಟನಾ ಕೌಶಲ್ಯ ಮತ್ತು ಸಂಪನ್ಮೂಲ ಕ್ರೋಢೀಕರಣ ಕೂಡಾ ಗೊತ್ತು. ಒಕ್ಕಲಿಗ ಪ್ರಾಬಲ್ಯವಿರುವ ಮೈಸೂರು, ಮಂಡ್ಯ, ಹಾಸನ, ರಾಮನಗರ, ತುಮಕೂರು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡಿಕೆಶಿ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಪ್ರಾಬಲ್ಯ ಮೆರೆದಿದ್ದಾರೆ. ಅವರ ಸಂಘಟನಾ ಚತುರತೆ ಗೌಡರ ಕುಟುಂಬದ ಕೆಂಗಣ್ಣಿಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮುಗಿದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಬಹಿರಂಗ ಬಂಡಾಯ ಎದ್ದು ಕಾಣುತ್ತಿದೆ. ಜೆಡಿಎಸ್ ಶಾಸಕರಾದ ಹಾಸನದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ, ತುಮಕೂರಿನ ಶ್ರೀನಿವಾಸ್, ಕೋಲಾರದ ಶ್ರೀನಿವಾಸಗೌಡ, ಮೈಸೂರಿನ ಜಿ.ಟಿ.ದೇವೇಗೌಡರು ಡಿಕೆಶಿ ಬೆಂಬಲಕ್ಕೆ ನಿಂತಿದ್ದಾರೆ. ಸದ್ಯದ ರಾಜಕೀಯ ಸನ್ನಿವೇಶವನ್ನು ಗಮನಿಸಿದರೆ ಡಿಕೆಶಿ ಸಿಎಂ ಗದ್ದುಗೆ ಏರಬೇಕು ಎಂಬ ಅಭಿಪ್ರಾಯ ಒಕ್ಕಲಿಗರಲ್ಲಿದೆ. ಯಡಿಯೂರಪ್ಪರ ಕೈಯಿಂದ ಬಿಜೆಪಿ ಜಾರಿಹೋಗುತ್ತಿದೆ. ಶಾಸಕರ ವಲಸೆಯಿಂದಾಗಿ ಜೆಡಿಎಸ್ ದುರ್ಬಲವಾಗುತ್ತಿದೆ. ಇದು ಡಿ.ಕೆ.ಶಿವಕುಮಾರ್ ಅವರಿಗೆ ವರವಾಗುತ್ತಿದೆ ಎನ್ನಲಾಗುತ್ತಿದೆ. ಇದು ಮತವಾಗಿ ಪರಿವರ್ತನೆಯಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ.