NationalNewsPolitics

ರಾಜ್ಯದಲ್ಲಿ ಕನಿಷ್ಟ 20 ಸೀಟು ಗೆಲ್ಲಿಸಿ ಕೊಡುತ್ತೇವೆ; ಡಿ.ಕೆ.ಶಿವಕುಮಾರ್

ನವದೆಹಲಿ; ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಕರ್ನಾಟಕ ರಾಜ್ಯದಿಂದ 20 ಸೀಟುಗಳನ್ನು ಗೆಲ್ಲಿಸಿ ಕೊಡುವುದಾಗಿ ನಮ್ಮ ನಾಯಕರಿಗೆ ಭರವಸೆ ನೀಡಿದ್ದೇವೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಕರ್ನಾಟಕದ ಕಾಂಗ್ರೆಸ್ ನಾಯಕರ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾವು ಬಿಜೆಪಿಯವರಂತೆ ಮಾತು ತಪ್ಪುವವರಲ್ಲ, ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ. ಇಡೀ ದೇಶಕ್ಕೆ ಕರ್ನಾಟಕ ಮಾದರಿಯನ್ನು ಹುಟ್ಟು ಹಾಕಿದ್ದೇವೆ. ಮಾನ್ಯ ಪ್ರಧಾನಿಗಳು ಮಾತನಾಡುತ್ತಾ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿಯಾಗಲಿದೆ ಎಂದು ಹೇಳಿದ್ದಾರೆ. ರಾಜ್ಯದ ಆರ್ಥಿಕತೆಗೆ ಏನೂ ಆಗಿವುದಿಲ್ಲ, ಸಿದ್ದರಾಮಯ್ಯ ಅವರು ನೀಡಿರುವ ಅತ್ಯುತ್ತಮ ಬಜೆಟ್ ಕರ್ನಾಟಕವನ್ನು ಎಂದಿಗೂ ದಿವಾಳಿ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

“ಇಂಡಿಯಾ” ಕರ್ನಾಟಕದಲ್ಲಿ ಜನ್ಮ ಪಡೆದಿದೆ. ನಾವು ಒಗ್ಗಟ್ಟಾಗಿ ಇದ್ದೇವೆ, ಹಾಗೂ ಸಾಮೂಹಿಕವಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲುವು ಖಂಡಿತ ಎನ್ನುವ ಸಂದೇಶವನ್ನು ಈಗಾಗಲೇ ನೀಡಿದ್ದೇವೆ. ಕರ್ನಾಟಕ ಮಾದರಿಯ ಗೆಲುವು ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ, ಇದರಂತೆ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ಕುರಿತು ಸಭೆಯಲ್ಲಿ 50 ನಾಯಕರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಲಾಯಿತು ಎಂದರು.

ನಾವು ಚುನಾವಣೆಗು ಮುಂಚೆ ನೀಡಿದ 5 ಗ್ಯಾರಂಟಿಗಳಲ್ಲಿ ಈಗಾಗಲೇ 4 ಗ್ಯಾರಂಟಿಗಳನ್ನು ಈಡೇರಿಸಿದ್ದು, ಅಭೂತಪೂರ್ವ ಯಶಸ್ಸು ಕಂಡಿವೆ. ಪ್ರತಿದಿನ 15 ಲಕ್ಷ ಮಹಿಳೆಯರು ಶಕ್ತಿ ಯೋಜನೆ ಲಾಭ ಪಡೆಯುತ್ತಿದ್ದಾರೆ, 10 ಕೆ.ಜಿ ಅಕ್ಕಿ ಯೋಜನೆ ಜಾರಿ ಆಗಿದೆ. ಆಗಸ್ಟ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಹಾಗೂ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬರಲಿದೆ. ಕರ್ನಾಟಕ ಮಾದರಿಯನ್ನು ಜನತೆಗೆ ನೀಡಿ ನಾವು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ಈ ಗೆಲುವಿಗೆ ಕಾರಣರಾದ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು ಎಂದು ಅವರು ಹೇಳಿದರು.

Share Post