BengaluruPolitics

ಮುಂದಿನ ಚುನಾವಣೆಯೇ ಕೊನೆ, ಚಾಮುಂಡೇಶ್ವರಿಯಲ್ಲಿ ನಾನೇ ತಪ್ಪು ಮಾಡಿದ್ದು; ಸಿದ್ದರಾಮಯ್ಯ

ಬೆಂಗಳೂರು; 2023ರ ಚುನಾವಣೆಯೇ ಕೊನೇ. ನಂತರ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಖಾಸಗಿ ಚಾನಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬಿಜೆಪಿಯನ್ನು ಸೋಲಿಸುವುದಕ್ಕಾಗಿ ನಾನು ಈ ಬಾರಿ ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದು ಹೇಳಿದ್ದಾರೆ.

ಸಿದ್ದರಾಮೋತ್ಸವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿರುವ ಸಿದ್ದರಾಮಯ್ಯ ಅವರು, ಕಾರ್ಯಕ್ರಮಕ್ಕೆ ಅಧಿಕೃತವಾಗಿ ಸಿದ್ದರಾಮೋತ್ಸವ ಎಂದು ಹೆಸರಿಟ್ಟಿಲ್ಲ. ನನ್ನ ಆಪ್ತರು, ಹಿತೈಷಿಗಳು ನಮ್ಮ 75 ನೇ ವರ್ಷ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಅಷ್ಟೇ. ನಾನು ನಡೆದು ಬಂದ ಹಾದಿ ಮೆಲುಕು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಮಾತನಾಡಿರುವ ಅವರು, ನಾನು ಕೂಡಾ ತಪ್ಪು ಮಾಡಿದ್ದೇನೆ. ನಾನು ಚಾಮುಂಡೇಶ್ವರಿ ಕ್ಷೇತ್ರದ ಕಡೆ ಗಮನ ಕೊಟ್ಟು ಹತ್ತು ವರ್ಷ ಆಗಿತ್ತು. ಪಕ್ಕದ ವರುಣಾ ಕ್ಷೇತ್ರಕ್ಕೆ ಬಂದ ಮೇಲೆ , ಚಾಮುಂಡೇಶ್ವರಿ ಪಕ್ಷ ಸಂಘಟನೆ ಹೇಗಿದೆ ಎಂದು ನಾನು ನೋಡಿರಲಿಲ್ಲ. ಬೂತ್‌ ಕಮಿಟಿಗಳು ಹೇಗೆ ಕೆಲಸ ಮಾಡುತ್ತಿವೆ ಎಂದು ನನಗೆ ಗೊತ್ತಿರಲಿಲ್ಲ. ಚುನಾವಣೆಯಲ್ಲಿ ಬೂತ್‌ ಕಮಿಟಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದ್ದಾರೆ.

ಮುಖ್ಯಮಂತ್ರಿಯನ್ನು ಶಾಸಕರು ಆಯ್ಕೆ ಮಾಡುತ್ತಾರೆ, ಜೊತೆಗೆ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಅದರ ಮೇಲೆ ನಾನು ನಂಬಿಕೆ ಇಟ್ಟಿದ್ದೇವೆ. ಮುಖ್ಯಮಂತ್ರಿಯಾಗುವ ಅವಕಾಶ ಕೊಟ್ಟರೆ ಬೇಡ ಎನ್ನುವುದಿಲ್ಲ. ಡಿ.ಕೆ.ಶಿವಕುಮಾರ್‌ ಸಿಎಂ ಆಗುವ ಆಸೆ ವ್ಯಕ್ತಪಡಿಸಿದರೆ ಯಾವುದೇ ತಪ್ಪಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share Post