ನೀರಿನ ಟ್ಯಾಂಕ್, ಗೋಡೆ ಕುಸಿದು ಇಬ್ಬರ ದುರ್ಮರಣ
ಬೆಂಗಳೂರು; ಕಟ್ಟಡವೊಂದರ ಮೇಲೆ ಇಟ್ಟಿದ್ದ ನೀರಿನ ಟ್ಯಾಂಕ್ ಹಾಗೂ ಗೋಡೆಯೊಂದು ಕುಸಿದುಬಿದ್ದಿದ್ದು, ಘಟನೆಯಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ. ಇಲ್ಲಿನ ಓಕ್ ಫರ್ನೀಚರ್ ಎಂಬ ಬಹುಮಹಡಿ ಕಟ್ಟಡದ ಮೇಲೆ ಸುಮಾರು 5 ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕ್‌ಗಳನ್ನು ಇರಿಸಲಾಗಿತ್ತು. ಈ ಟ್ಯಾಂಕ್‌ಗಳ ಮೂಲಕ ಇಡೀ ಕಟ್ಟಡಕ್ಕೆ ನೀರು ಪೂರೈಕೆಯಾಗುತ್ತಿತ್ತು. ಆದ್ರೆ ನಿನ್ನೆ ರಾತ್ರಿ ಟ್ಯಾಂಕ್ ಇರಿಸಿದ್ದ ಸ್ಥಳದ ಗೋಡೆ ಕುಸಿದಿದೆ. ಇದ್ರಿಂದ ಎರಡೂ ನೀರಿನ ಟ್ಯಾಂಕ್‌ಗಳೂ ಕೆಳಗೆಬಿದ್ದಿವೆ. ನಾಲ್ಕನೇ ಮಹಡಿಯಿಂದ ಟ್ಯಾಂಕ್‌ಗಳು ಕೆಳಗೆ ಬಿದ್ದಿದ್ದರಿಂದ ಪ್ರಾಣಹಾನಿಗೆ ಕಾರಣವಾಗಿದೆ.
ಕಟ್ಟಡದ ಪಕ್ಕದಲ್ಲೇ ವ್ಯಕ್ತಿಯೊಬ್ಬ ಎಗ್ ರೈಸ್ ಮಾಡುವ ಬೀದಿ ಅಂಗಡಿ ನಡೆಸುತ್ತಾನೆ. ಅದೇ ಸ್ಥಳದಲ್ಲಿ ಟ್ಯಾಂಕ್‌ಗಳು ಬಿದ್ದಿದೆ. ಆ ಸಮಯದಲ್ಲಿ ವ್ಯಾಪಾರಿಯ ಜೊತೆಗೆ ಎಗ್ ರೈಸ್ ತಿನ್ನಲು ಬಂದಿದ್ದ ಮೂವರು ಸ್ಥಳದಲ್ಲಿದ್ದರು. ನಾಲ್ವರ ಮೇಲೂ ಸಂಪೂರ್ಣ ನೀರು ತುಂಬಿದ್ದ ಟ್ಯಾಂಕ್‌ಗಳು ಬಿದ್ದಿವೆ. ಇದ್ರಿಂದಾಗಿ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಒಬ್ಬ ಗ್ರಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಮೊದಲು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.