ಪಾಟ್ನಾದಲ್ಲಿ ಜೆಡಿಯು ಮುಖಂಡನ ಹತ್ಯೆ; ಪೊಲೀಸ್ ಠಾಣೆ ಧ್ವಂಸ
ಪಾಟ್ನಾ(ಬಿಹಾರ): ಆಡಳಿತಾರೂಢ ಜೆಡಿಯು ಪಕ್ಷದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಬಿಹಾರ ರಾಜಧಾನಿ ಪಾಟ್ನಾದ ದನಾಪುರ ಪ್ರದೇಶದಲ್ಲಿ ನಡೆದಿದೆ. ಜೆಡಿಯು ಮುಖಂಡ ದೀಪಕ್ ಕುಮಾರ್ ಮೆಹ್ತಾ ಊಟ ಮುಗಿಸಿ ಮನೆಯ ಆವರಣದಲ್ಲಿ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಅಪರಿಚಿತರು ದಾಳಿ ನಡೆಸಿದ್ದಾರೆ.
ದೀಪಕ್ ಕುಮಾರ್ ಮೆಹ್ತಾ ಅವರ ಎದೆಗೆ ಒಂದು ಗುಂಡು ತಗುಲಿದ್ದರೆ, ಮತ್ತೊಂದು ತಲೆಗೆ ತಗುಲಿದೆ. ಗುಂಡು ಹಾರಿಸಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕೂಡಲೇ ದೀಪಕ್ ಕುಮಾರ್ ಮೆಹ್ತಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ದೀಪಕ್ ಅವರು ದಾನಾಪುರ ನಗರ ಪರಿಷತ್ ಉಪಾಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ. ತಮ್ಮ ನಾಯಕ ಹತ್ಯೆಯಾದ ವಿಷಯ ತಿಳಿಯುತ್ತಿದ್ದಂತೆ ದೀಪಕ್ ಅಭಿಮಾನಿಗಳು ಗದ್ದಲ ಶುರು ಮಾಡಿದ್ದಾರೆ. ನಸ್ರಿಗಂಜ್ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ. ನಂತರ ಡಣಾಪುರ- ಗಾಂಧಿ ಮೈದಾನ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.