ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸಿ ಮಾರಾಟ; 2 ಕೋಟಿ ರೂ. ಮಾಲು ಜಪ್ತಿ!
ಹೈದರಾಬಾದ್; ನಕಲಿ ಮೈಸೂರು ಸ್ಯಾಂಡಲ್ ಸೋಪ್‌ಗಳನ್ನು ತಯಾರು ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಲಾಗಿದೆ. ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್‌ಗಳನ್ನು ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ, ಕಾದು ಕಾದು ಆರೋಪಿಗಳನ್ನು ಮಾಲು ಸಮೇತ ಹಿಡಿಯಲಾಗಿದೆ. ಸುಮಾರು 2 ಕೋಟಿ ರೂಪಾಯಿ ಬೆಲೆ ಬಾಳುವ ನಕಲಿ ಮಾಲನ್ನು ಕೂಡಾ ಜಪ್ತಿ ಮಾಡಲಾಗಿದೆ.
ಮಾಲಕಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ಹಾಗೂ ಇತರೆ ಉತ್ಪನ್ನಗಳ ತಯಾರಿ ನಡೆಯುತ್ತಿತ್ತು. ಈ ಸಂಬಂಧ ರಾಕೇಶ್ ಜೈನ್ ಹಾಗೂ ಮಹಾವೀರ್ ಎಂಬಿಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಕೆ ಎಸ್ ಡಿ ಎಲ್ ಅಧ್ಯಕ್ಷರೂ ಆದ ಸಚಿವ ಎಂ.ಬಿ ಪಾಟೀಲ್‌ಗೆ ಕೆಲ ದಿನಗಳ ಹಿಂದೆ ಅನಾಧೇಯ ಕರೆ ಬಂದಿತ್ತು. ಅವರು ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು.
ಇದರ ಆಧಾರದ ಮೇಲೆ ಸಿಕಂದರಾಬಾದಿನಲ್ಲಿರುವ ಸಂಸ್ಥೆಯ ಅಧಿಕೃತ ಮಾರಾಟ ಕಚೇರಿಯ ಸಿಬ್ಬಂದಿ ನಕಲಿ ಮಾರಾಟಗಾರರ ಜಾಡು ಹಿಡಿದಿದ್ದರು. ಆಗ ಹೈದರಾಬಾದ್‌ನ ಕೆಲ ಪ್ರದೇಶಗಳಲ್ಲಿ ಈ ನಕಲಿ ಮಾಲು ಮಾರಾಟ ಆಗುತ್ತಿರುವುದು ಕಂಡುಬಂದಿತ್ತು. ಆದರೂ ಗುಟ್ಟು ಬಿಟ್ಟುಕೊಡದ ಸಿಬ್ಬಂದಿ, ತಯಾರಿ ಮಾಡುತ್ತಿರುವವರ ಜಾಡು ಹಿಡಿದರು. ಸಪ್ಲೈ ಕೊಡುತ್ತಿರುವವರ ಮಾಹಿತಿ ಪಡೆದುಕೊಂಡು, ಅವರಿಗೆ 25 ಲಕ್ಷ ರೂಪಾಯಿ ಉತ್ಪನ್ನ ಖರೀದಿ ಮಾಡುತ್ತೇವೆಂದು ಹೇಳಿದ್ದರು. ನಿನ್ನ ಗೋಡೌನ್ ಬಳಿಯೇ ಬಂದು ಮಾಲು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದರು.
ಈ ಮಾತನ್ನು ನಂಬಿದ ನಕಲಿ ಮಾರಾಟಗಾರರು ನಕಲಿ ಸೋಪು ಉತ್ಪಾದನಾ ಘಟಕದ ಅಡ್ರೆಸ್ ಕೊಟ್ಟಿದ್ದಾರೆ. ಅಲ್ಲಿಗೆ ಹೋಗಿ ನೋಡಿದಾಗ ನಕಲಿ ಮೈಸೂರ್ ಸ್ಯಾಂಡಲ್ ಸೋಪ್‌ಗಳು ತಯಾರಿ ಮಾಡುತ್ತಿರುವುದು ಕಂಡುಬಂದಿದೆ. ತಲಾ 150 ಗ್ರಾಂ ತೂಕದ 3 ಸಾಬೂನುಗಳಿರುವ 20 ಕಾರ್ಟನ್ ಬಾಕ್ಸ್ ಗಳು (ಪ್ರತಿಯೊಂದು ಬಾಕ್ಸ್ ನಲ್ಲಿ 90ರಂತೆ ಒಟ್ಟು 1800 ಪೀಸ್ ಗಳು), ತಲಾ 75 ಗ್ರಾಂ ನ 47 ಕಾರ್ಟನ್ ಬಾಕ್ಸ್ ಗಳು (9400 ಪೀಸ್ ಗಳು), 150 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಖಾಲಿ ಕಾರ್ಟನ್ ಬಾಕ್ಸ್ ಗಳು ಮತ್ತು 75 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಕಾರ್ಟನ್ ಬಾಕ್ಸ್ ಗಳು ನಕಲಿ ಘಟಕದಲ್ಲಿ ಪತ್ತೆಯಾಗಿವೆ.