ತಮಿಳುನಾಡು ನದಿಜೋಡಣೆ ಯೋಜನೆಗಳಿಗೆ ಆಕ್ಷೇಪ ಸಲ್ಲಿಕೆ: ಸಿಎಂ ಬೊಮ್ಮಾಯಿ
ದೆಹಲಿ: ತಮಿಳುನಾಡು ಸರ್ಕಾರ ಕೈಗೊಂಡಿರುವ ಹೊಗೆನಕಲ್ ಜಲವಿದ್ಯುತ್ ಯೋಜನೆ ಮತ್ತು ಕಾವೇರಿ, ಗುಂಡಾರ್ ಹಾಗೂ ವೈಗೈ ನದಿಜೋಡಣೆ ಯೋಜನೆಗಳನ್ನು ನ್ಯಾಯಾಲಯದ ಮೂಲಕ ವಿರೋಧಿಸುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಂತರರಾಜ್ಯ ಜಲವಿವಾದಗಳ ಬಗ್ಗೆ ಸಚಿವರು, ಹಿರಿಯ ನ್ಯಾಯವಾದಿಗಳು, ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ, ಕರ್ನಾಟಕ ರಾಜ್ಯ ನೆಲ ಜಲದ ವಿಚಾರದಲ್ಲಿ ಎಂದಿಗೂ ಒಂದಾಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎನ್.ಜಿ.ಟಿ ಹಾಗೂ ಮತ್ತೊಂದು ಪ್ರಕರಣ ಒಟ್ಟಿಗೆ ವಿಚಾರಣೆಗೆ ಬರಲಿದ್ದು, ನಮ್ಮ ಆಕ್ಷೇಪಗಳನ್ನು ಸಲ್ಲಿಸಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದ್ದೇವೆ ಎಂದರು.
ನ್ಯಾಯಮೂರ್ತಿಗಳ ನೇಮಕ
ಕೃಷ್ಣಾ ನದಿಯ 2 ನೇ ಟ್ರಿಬ್ಯುನಲ್ ಗಳ ಅಧಿಸೂಚನೆಗೆ ಸಂಬಂಧಿಸಿದಂತೆ ಕಳೆದ ಬಾರಿ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದು, ಈ ಬಾರಿ ಹೊಸ ನ್ಯಾಯಮೂರ್ತಿಗಳ ನೇಮಕ್ಕಕ್ಕೆ ರಿಜಿಸ್ಟ್ರಾರ್ ಜನರಲ್ ಅವರ ಬಳಿ ಮುಂದಿನ ವಿಚಾರಣೆಯಷ್ಟರಲ್ಲಿ ನೇಮಕವಾಗಬೇಕೆಂದು ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಕ್ರಮಕೈಗೊಳ್ಳಲಿದ್ದಾರೆ. ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದರು.
ಮಹದಾಯಿ ನದಿಯ ಬಗ್ಗೆಯೂ ಚರ್ಚೆಯಾಗಿದೆ. ವಿಚಾರಣೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕೆಂದು ಕೋರಲಾಗಿದೆ. ಅದೂ ಕೂಡ ಅಂತಿಮ ಘಟ್ಟದಲ್ಲಿದೆ. ಟ್ರಿಬ್ಯುನಲ್ ಬಗ್ಗೆ ಎಲ್ಲಾ ರಾಜ್ಯಗಳೂ ಆಕ್ಷೇಪ ವ್ಯಕ್ತಪಡಿಸಿರುವ ಪ್ರಕರಣವಾಗಿದ್ದು, ಅಲ್ಲಿಯೂ ಕೂಡ ನಾವು ಪರಿಹಾರ ಕಂಡುಕೊಳ್ಳಬೇಕಿದೆ. ನದಿ ತಿರುವಿನ ಬಗ್ಗೆ ಈಗಾಗಲೇ ಚರ್ಚೆಯಾಗಿ ನಿರ್ಧಾರವಾಗಿದೆ. ಡಿ.ಪಿ.ಆರ್ ಒಪ್ಪಿಗೆ ಆದರೆ, ಕಾಮಗಾರಿಯನ್ನು ಮುಂದುವರೆಸಲಾಗುವುದು ಎಂದರು.