ಎರಡನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್
ಗಾಂಧಿನಗರ; ಗುಜರಾತ್‍ನ 18ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು. ಕಳೆದ ವರ್ಷ ವಿಜಯ್ ರೂಪಾನಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಭೂಪೇಂದ್ರ ಪಟೇಲ್ ರನ್ನು ಸಿಎಂ ಸ್ಥಾನಕ್ಕೇರಿಸಲಾಗಿತ್ತು. ಇದೀಗ ಏಳನೇ ಬಾರಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಭೂಪೇಂದ್ರ ಪಟೇಲ್ ಎರಡನೇ ಬಾರಿ ಸಿಎಂ ಆಗಿದ್ದಾರೆ.
ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಭೂಪೇಂದ್ರ ಪಟೇಲ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಇವರ ಜೊತೆಗೆ 16 ಮಂದಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿದರು. ಈ ಹಿಂದೆ ಭೂಪೇಂದ್ರ ಪಟೇಲ್ ಸಂಪುಟದಲ್ಲಿದ್ದ ಕಾನು ದೇಸಾಯಿ, ಋಷಿಕೇಶ್ ಪಟೇಲ್, ರಾಘವ್ಜಿ ಪಟೇಲ್, ಬಲವಂತಸಿನ್ಹ್ ರಜಪೂತ್, ಕುನ್ವರ್ಜಿ ಬವಲಿಯಾ, ಮುಲು ಬೇರಾ, ಕುಬೇರ್ ದಿಂಡೋರ್ ಮತ್ತು ಭಾನುಬೆನ್ ಬಬಾರಿಯಾ ಮತ್ತೆ ಕ್ಯಾಬಿನೆಟ್‍ನಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜೆ.ಪಿ ನಡ್ಡಾ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿದ್ದರು. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.