ಗಾಯಕ ಸಿಧು ಹತ್ಯೆ ಕೇಸ್; ನಟ ಸಲ್ಮಾನ್ ಖಾನ್ಗೆ ಭದ್ರತೆ ಹೆಚ್ಚಳ
ಪಂಜಾಬಿ ಗಾಯಕ ಸಿಧು ಹತ್ಯೆ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಭದ್ರತೆ ಹೆಚ್ಚಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಗಾಯಕ ಸಿಧು ಹತ್ಯೆಗೆ ಕಾರಣರು ಎಂದು ಶಂಕಿಸಲಾದ ವ್ಯಕ್ತಿಗಳು, ಸಲ್ಮಾನ್ ಖಾನ್ ಅವರಿಗೆ ತೊಂದರೆ ಮಾಡಬಹುದು ಎನ್ನುವ ಕಾರಣಕ್ಕೆ ಇಂಥದ್ದೊಂದು ಕ್ರಮ ತಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯಾದ ಕೆಲವೇ ಗಂಟೆಗಳಲ್ಲೇ ಅದರ ಹಿಂದೆ ಯಾರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಈ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಾರಣವೆಂದು ಅನುಮಾನ ವ್ಯಕ್ತ ಪಡಿಸಲಾಗುತ್ತಿದೆ. ಬಿಷ್ಣೋಯ್ ಸದ್ಯ ತಿಹಾರ್ ಜೈಲಿನಲ್ಲಿದ್ದರೂ, ಅಲ್ಲಿಂದಲೇ ಸಿಧು ಅವರನ್ನು ಕೊಲ್ಲಿಸಲಾಗಿದೆ ಎನ್ನುವ ಆಪಾದನೆ ಇದೆ.
ಸಲ್ಮಾನ್ ಖಾನ್ ಈ ಹಿಂದೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕೃಷ್ಣಮೃಗವನ್ನು ಪವಿತ್ರ ಜೀವಿ ಎಂದು ಪರಿಗಣಿಸಿರುವ ಬಿಷ್ಣೋಯ್ ಸಮುದಾಯಕ್ಕೆ ಸೇರಿರುವ ಲಾರೆನ್ಸ್ ಬಿಷ್ಣೋಯ್ ಈ ಹಿಂದೆಯೇ ಸಲ್ಮಾನ್ ಖಾನ್ ಅವರನ್ನು ಜೋಧ್ ಪುರ ನ್ಯಾಯಾಲಯದ ಹೊರಗೆ ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದ. ಈ ಕಾರಣದಿಂದಾಗಿ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.