ಪಠ್ಯಪುಸ್ತಕ ಪರಿಷ್ಕರಣೆ ಗೊಂದಲ; ನಾಳೆಯೇ ಪರಿಶೀಲಿಸಿ ಕ್ರಮ – ಸಿಎಂ ಬೊಮ್ಮಾಯಿ
ಉಡುಪಿ; ಪಠ್ಯಪುಸ್ತಕ ಪರಿಷ್ಕರಣೆ ಗೊಂದಲಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಸೂಚಿಸಲಾಗಿದೆ. ಜೂನ್ 2ರಂದು ವರದಿ ಕೈಸೇರಲಿದ್ದು, ವರದಿ ಪರಿಶೀಲಿಸಿ, ಮುಂದಿನ ಕ್ರಮದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಣಿಪಾಲದ ಕಂಟ್ರಿ ಇನ್ ಹೋಟೆಲ್ ಸಭಾಂಗಣದಲ್ಲಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಸಂಬಂಧ ಸ್ವಾಮೀಜಿಗಳು, ಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲರ ಮನವಿಯನ್ನೂ ನಾವು ಪರಿಗಣಿಸುತ್ತೇವೆ ಎಂದು ಹೇಳಿದರು.
ಪಠ್ಯ ಪರಿಷ್ಕರಣೆಗೆ ಒಂದು ವರ್ಗ ವಿರೋಧ ವ್ಯಕ್ತಪಡಿಸುತ್ತಿದೆ. ಮತ್ತೊಂದು ವರ್ಗ ಪಠ್ಯದಲ್ಲಿ ಮೂಲ ಬದಲಾವಣೆಯಾಗಿಲ್ಲ ಎಂದು ಹೇಳುತ್ತಿದೆ. ವಾಸ್ತವಾಂಶ ಅರಿತು ನಾಳೆಯೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಪಠ್ಯದಿಂದ ಬರಹಗಳನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ಸಾಹಿತಿಗಳ ಜತೆಗೂ ಮಾತುಕತೆ ನಡೆಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.