National

ಡಿಜಿಟಲ್‌ ಕರೆನ್ಸಿ ಮೇಲೆ 30%ತೆರಿಗೆ: ರಾಜಕೀಯ ಹಗರಣ ಎಂದ ಕೈ ನಾಯಕರು

ದೆಹಲಿ: ಡಿಜಿಟಲ್ ಕರೆನ್ಸಿ ವರ್ಗಾವಣೆಗೆ ಶೇ.30ರಷ್ಟು ತೆರಿಗೆ ವಿಧಿಸುವುದಾಗಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು  ರಾಜಕೀಯ ಹಗರಣ ಎಂದು ಬಿಂಬಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ವಿತ್ತ ಸಚಿವೆಗೆ  ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಕ್ರಿಪ್ಟೋಕರೆನ್ಸಿಯನ್ನು ವಾಸ್ತವವಾಗಿ ಕಾನೂನುಬದ್ಧ ಗೊಳಿಸಲಾಗಿದೆಯೇ? ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ, ದೇಶದಲ್ಲಿ ವರ್ಚುವಲ್ ‘ಡಿಜಿಟಲ್’ ಕರೆನ್ಸಿ ವಹಿವಾಟುಗಳು ಭಾರಿ ಪ್ರಮಾಣದಲ್ಲಿ ನಡೆಯುತ್ತಿವೆ ಹಾಗಾಗಿ ತೆರಿಗೆ ವಿಧಿಸಲಾಗಿದೆ ಎಂದು ಹೇಳಿದರು. ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಗೆ ಶೇಕಡಾ 30 ಮತ್ತು  ಒಂದು ಪರ್ಸೆಂಟ್ ಟಿಡಿಎಸ್ ತೆರಿಗೆ ವಿಧಿಸಲಾಗುತ್ತದೆ ಎಂದಿದ್ದಾರೆ.

ವರ್ಚುವಲ್ ಆಸ್ತಿಗಳನ್ನು ಉಡುಗೊರೆ ರೂಪದಲ್ಲಿ ನೀಡಿದರೂ ಅದೇ ತೆರಿಗೆ ಅನ್ವಯಿಸುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಸರ್ಕಾರದ ಈ ನಿಲುವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಕ್ರಿಪ್ಟೋಕರೆನ್ಸಿ ಬಿಲ್ ತೆಗೆದುಕೊಳ್ಳದೆ ತೆರಿಗೆ ಯಾಕೆ ಹಾಕಿದ್ರಿ ಎಂದು ಪ್ರಶ್ನಿಸಿದ್ದಾರೆ.ಈ ಬಗ್ಗೆ ಹಣಕಾಸು ಸಚಿವರು ದೇಶದ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿ ವಿನಿಮಯದ ನಿಯಂತ್ರಣ ಏನು? ಹೂಡಿಕೆದಾರರ ರಕ್ಷಣೆ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನೆಗಳ ಸುರಿಮಳೆಯನ್ನು ವಿತ್ತ ಸಚಿವೆಗೆ ಹಾಕಿದ್ರು.  ಬಜೆಟ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಪ್ರಸ್ತಾಪಿಸಿದ್ದರೂ, ಈ ಬಗ್ಗೆ ಯಾವುದೇ ಕಾನೂನು ಇಲ್ಲ ಮತ್ತು ಈ ಹಿಂದೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾದಿಸಿದ್ದಾರೆ.

 

Share Post