ನನ್ನ ಮನೆಯ ಮಾಲೀಕ ಯುದ್ಧಕ್ಕೆ ಹೋಗಿದ್ದಾನೆ, ಆತನ ಕುಟುಂಬವನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿ-ನೇಹಾ
ಉಕ್ರೇನ್: ಯುದ್ಧ ಪೀಡಿತ ಉಕ್ರೈನ್‌ನಿಂದ ನಮ್ಮನ್ನು ರಕ್ಷಿಸಿ ಎಂದು ಉಕ್ರೈನ್‌ನಲ್ಲಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ವಿಡಿಯೋ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಭಾರತಕ್ಕೆ ಮರಳಿದವರು ಖುಷಿಪಟ್ಟಿದ್ದಾರೆ. ಆದರೆ ಇಲ್ಲೊಬ್ಬಳು ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿನಿ, “ನನ್ನ ಮನೆಯ ಮಾಲೀಕ ಯುದ್ಧಕ್ಕೆ ಹೋಗಿದ್ದಾನೆ. ಇಂಥ ಸಂದರ್ಭದಲ್ಲಿ ಅವರ ಮನೆಯ ಮಕ್ಕಳನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಹಾಗಾಗಿ ನಾನು ಭಾರತಕ್ಕೆ ಬರಲಾರೆ” ಎಂದು ಭಾರತಕ್ಕೆ ಬರಲು ನಿರಾಕರಿಸಿದ್ದಾಳೆ…!
ಹರ್ಯಾಣ ಮೂಲದ ನೇಹಾ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಉಕ್ರೈನ್‌ನಲ್ಲಿ ಯೋಧರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದಳು. ರಷ್ಯಾ, ಉಕ್ರೈನ್ ಮೇಲೆ ಯುದ್ಧ ಘೋಷಿಸಿದಾಗ, ಮನೆಯ ಮಾಲೀಕ ನೇಹಾಗೆ,” ನಾನು ಯುದ್ಧಕ್ಕೆ ಹೋಗುತ್ತಿದ್ದು ನನ್ನ ತಾಯಿ ನಾಲ್ಕು ಮಕ್ಕಳನ್ನು ನೋಡಿಕೊಳ್ಳುವಂತೆ ನೇಹಾಗೆ ತಿಳಿಸಿ ಹೋಗಿದ್ದ. ಈಗ ಆ ಯೋಧನ ಮಾತು ಉಳಿಸಿಕೊಳ್ಳಲು ಮತ್ತು ಈ ಸಂದರ್ಭದಲ್ಲಿ 4 ಮಕ್ಕಳನ್ನು ಬಿಟ್ಟು ಬರುವುದು ಅಸಾಧ್ಯವೆನಿಸಿ ಭಾರತಕ್ಕೆ ಮರಳುವುದಕ್ಕೆ ನಿರಾಕರಿಸಿದ್ದಾಳೆ.
“ಈ ಭೀಕರ ಯುದ್ಧದಲ್ಲಿ ಅಕ್ಕಪಕ್ಕದಲ್ಲೇ ಬಾಂಬ್ ಸದ್ದುಗಳು ಕೇಳುತ್ತಿವೆ. ಈ ಪರಿಸ್ಥಿತಿಯಲ್ಲಿ ನಾನು ಯಾವಾಗ ಬೇಕಾದರೂ ಸಾಯಬಹುದು ಅಥವಾ ಅದೃಷ್ಯವಶಾತ್ ಬದುಕಬಹುದು. ಆದರೆ ಸದ್ಯ 4 ಮಕ್ಕಳೊಂದಿಗೆ ಬಂಕರ್‌ನಲ್ಲಿ ಆಶ್ರಯ ಪಡೆದು ಚೆನ್ನಾಗಿದ್ದೇವೆ” ಎಂದು ಕುಟುಂಬದ ಜತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾಳೆ. ನೇಹಾ ಅವರ ಧೈರ್ಯ, ಪ್ರಮಾಣಿಕತೆ, ನಂಬಿಕೆ ಮೆಚ್ಚುವಂಥದ್ದು. ಮನುಷ್ಯನಿಗೆ ಮಾನವೀಯತೆ ಮೌಲ್ಯ ಎಷ್ಟು ಮುಖ್ಯವಾದುದು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾಳೆ ನೇಹಾ.