ಚಿನ್ನದ ಗಣಿಯಲ್ಲಿ ಭೂಕುಸಿತ; 38 ಕಾರ್ಮಿಕರ ದುರ್ಮರಣ
ಸೂಡಾನ್: ಇಲ್ಲಿನ ಖಾರ್ಟೂಮ್ ಬಳಿ ಇರುವ ಚಿನ್ನದ ಗಣಿಯಲ್ಲಿ ಭಾರಿ ದುರಂತ ನಡೆದಿದೆ. ಚಿನ್ನದ ಗಣಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ವೇಳೆ ಭೂಕುಸಿತವುಂಟಾಗಿದ್ದು, ದುರಂತದಲ್ಲಿ 38 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದಕ್ಷಿಣ ಸೂಡಾನ್‌ನ ಕೋರ್ಡೋಫಾನ್ ರಾಜ್ಯದ ನುಹಾದ್ ಪಟ್ಟಣದ ಬಳಿ ಈ ದುರ್ಘಟನೆ ನಡೆದಿದೆ.
ಇದು ಗಣಿಗಾರಿಕೆಗೆ ಸೂಕ್ತವಾದ ಪ್ರದೇಶವಲ್ಲ ಎಂದು ಅಲ್ಲಿನ ಸರ್ಕಾರ ನಿರ್ಧಾರ ಮಾಡಿತ್ತು. ಶೀಘ್ರದಲ್ಲೇ ಗಣಿಗಾರಿಕೆ ನಿಲ್ಲಿಸುವುದಕ್ಕೆ ಸಿದ್ಧತೆ ನಡೆಸಲಾಗಿತ್ತು. ಈ ನಡುವೆಯೇ ಈ ದುರಂತ ನಡೆದುಹೋಗಿದೆ. ಗಣಿಗಾರಿಕೆ ಕೆಲಸ ಮಾಡಬೇಡಿ ಎಂದು ಸರ್ಕಾರ ಸೂಚನೆ ನೀಡಿದ್ದರೂ, ಅದನ್ನು ಲೆಕ್ಕಸದೇ ಗಣಿಗಾರಿಕೆ ನಡೆಸಲಾಗುತ್ತಿತ್ತು. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಸಾಂಪ್ರದಾಯಿಕ ಗಣಿಗಾರಿಕೆಯು ಸುಡಾನ್‌ನಲ್ಲಿನ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸುಮಾರು ಶೇಕಡ 75ರಷ್ಟು ಕೊಡುಗೆ ನೀಡುತ್ತದೆ. ಇದು ವರ್ಷಕ್ಕೆ 93 ಟನ್‌ಗಳನ್ನು ಮೀರುತ್ತದೆ ಎಂದು ತಿಳಿದುಬಂದಿದೆ.