Economy

Financial Freedom; ದೇಶದ ಶೇ.90ರಷ್ಟು ಜನ 25 ಸಾವಿರಕ್ಕಿಂತ ಹೆಚ್ಚು ದುಡಿಯುತ್ತಿಲ್ಲ!

ಬೆಂಗಳೂರು; ಎಷ್ಟೋ ಜನ ಅಂದುಕೊಳ್ಳುವುದು ಏನಂದ್ರೆ ನಾವು ಕಡಿಮೆ ಸಂಪಾದನೆ ಮಾಡುತ್ತೇವೆ. ನಾವು ಎಲ್ಲಿ ಶ್ರೀಮಂತರಾಗೋದು, ಎಲ್ಲಿ ಉಳಿತಾಯ ಮಾಡೋದು ಅಂತ. ಆದ್ರೆ, ಆರ್ಥಿಕ ಶಿಸ್ತು ರೂಢಿಸಿಕೊಂಡರೆ ಕಡಿಮೆ ಸಂಪಾದನೆ ಇರುವವರು ಕೂಡಾ ಮುಂದೊಂದು ದಿನ ಅಪಾರ ಪ್ರಮಾಣದ ಆಸ್ತಿ ಸಂಪಾದನೆ ಮಾಡಬಹುದು.  (Financial Freedom)

ದೇಶದ ಶೇ.90ರಷ್ಟು ಜನರ ತಿಂಗಳ ಆದಾಯ 25 ಸಾವಿರಕ್ಕಿಂತ ಕಡಿಮೆ!

ನಿಮಗೆ ಗೊತ್ತಾ ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.10ಕ್ಕಿಂತ ಕಡಿಮೆ ಜನ ತಿಂಗಳಿಗೆ 25 ಸಾವಿರಕ್ಕಿಂತ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಶೇಕಡಾ 90ರಷ್ಟು ಜನ 25 ಸಾವಿರಕ್ಕಿಂತ ಕಡಿಮೆ ದುಡಿಯುತ್ತಾರೆ. ಅಂದರೆ ದೇಶದ ಬಹುಪಾಲು ಜನರ ಆದಾಯ 25 ಸಾವಿರಕ್ಕಿಂತ ಕಡಿಮೆ ಇದೆ. ಅದೂ ಕೂಡಾ ಮನೆಯಲ್ಲಿ ನಾಲ್ಕೈದು ಜನ ಇದ್ದರೆ, ಇಬ್ಬರೋ, ಇಬ್ಬರೋ ಮಾತ್ರ ದುಡಿಯುತ್ತಿರುತ್ತಿರುತ್ತಾರೆ. ಉಳಿದವರು, ಆ ಇಬ್ಬರು ದುಡಿಯುವ ಹಣದಲ್ಲಿ ಜೀವನ ಮಾಡುತ್ತಿರುತ್ತಾರೆ.

ಶೇ.10ರಷ್ಟು ಉಳಿತಾಯ ಮಾಡಿದರೂ ನೀವು ಶ್ರೀಮಂತರಾಗಬಹುದು!

ನನಗೆ ಬರೋದು ಬರೀ 25 ಸಾವಿರ ರೂಪಾಯಿ ಸಂಬಳ. ಇದರಲ್ಲಿ ಹೇಗೆ ಉಳಿತಾಯ ಮಾಡೋದು ಅನ್ನೋದು ಹಲವರ ಪ್ರಶ್ನೆ. ಲಕ್ಷ ಲಕ್ಷ ಸಂಪಾದನೆ ಮಾಡುವವರೇ ತಿಂಗಳ ಕೊನೆಯಲ್ಲಿ ಸಾಲ ಮಾಡುತ್ತಾರೆ. ನಮಗೆ ಬರೋ ಸಂಬಳದಲ್ಲಿ ಉಳಿತಾಯ ಮಾಡೋದು ಹೇಗೆ ಎಂದು ಪ್ರಶ್ನೆ ಮಾಡುತ್ತಾರೆ. ಆದ್ರೆ ಇಬ್ಬರ ಮನಿ ಮೈಂಡ್‌ ಸೆಟ್‌ (Money Mindset) ಕೂಡಾ ಸರಿ ಇಲ್ಲ ಎಂದೇ ಅರ್ಥ.

ಯಾಕಂದ್ರೆ, ಹೆಚ್ಚು ಸಂಪಾದನೆ ಮಾಡುವವರು ಆಡಂಬರದ ಜೀವನಕ್ಕಾಗಿ ಸಂಪಾದಿಸಿದ್ದೆಲ್ಲವನ್ನೂ ಕಳೆಯುತ್ತಿರುತ್ತಾರೆ. ಅಂತಹವನ್ನು ನೋಡಿಕೊಂಡು ಕಡಿಮೆ ಸಂಪಾದನೆ ಮಾಡುವವರೂ ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳೋದಿಲ್ಲ. ಮನಸ್ಸು ಮಾಡಿದರೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಪಾದನೆ ಮಾಡುವವರು ಕೂಡಾ ಸಣ್ಣ ಮಟ್ಟದಲ್ಲಿ ಹೂಡಿಕೆ ಮಾಡಿ ದೊಡ್ಡ ಮಟ್ಟದಲ್ಲಿ ರಿಟರ್ನ್ಸ್‌ ಪಡೆಯಬಹುದು.

ನಿಮಗೆ 25 ಸಾವಿರ ರೂಪಾಯಿ ಸಂಬಳ ಬರುತ್ತಿದ್ದರೆ, ನೀವು ಮನಸ್ಸು ಮಾಡಿದರೆ ಅದರಲ್ಲಿ ಕನಿಷ್ಠ 10 ಪರ್ಸೆಂಟ್‌ ಉಳಿತಾಯ ಮಾಡಬಹುದು. ಅಂದರೆ 2.5 ಸಾವಿರ ರೂಪಾಯಿ ತಿಂಗಳಿಗೆ ಉಳಿತಾಯ ಮಾಡಿ, ದೀರ್ಘಕಲಾದ ನಂತರ ದೊಡ್ಡ ಮೊತ್ತವನ್ನು ನೀವು ಪಡೆಯಬಹುದು.

20 ವರ್ಷ ಇಂಡೆಕ್ಸ್‌ ಮ್ಯೂಚ್ಯುಯಲ್‌ ಫಂಡ್‌ನಲ್ಲಿ ಹೂಡಿ

ನೀವು 2500 ರೂಪಾಯಿಯಷ್ಟು ಪ್ರತಿ ತಿಂಗಳು ಇಂಡೆಕ್ಸ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು. ಇದರಿಂದ ನಿಮಗೆ ಕಡಿಮೆ ಅಂದರೂ ಕೂಡಾ ವಾರ್ಷಿಕ ಶೇ.12ರಷ್ಟು ಬಡ್ಡಿ ಬರುತ್ತದೆ. ಹೀಗೆ ನೀವು 20 ವರ್ಷಗಳ ಕಾಲ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಹಣವನ್ನು ನೀವು ಪಡೆದುಕೊಳ್ಳಬಹದು. ಈ ಮೂಲಕ ಆರ್ಥಿಕ ಸ್ವಾಲವಂಬನೆ ಸಾಧಿಸಬಹುದು.

ಕಟ್ಟೋದು 6 ಲಕ್ಷ ರೂ., 20 ವರ್ಷಕ್ಕೆ ಸಿಗೋದು 24 ಲಕ್ಷ ರೂ.

ನೀವು ಕೇವಲ ತಿಂಗಳಿಗೆ 2500 ರೂಪಾಯಿಯಂತೆ 20 ವರ್ಷ ಮ್ಯೂಚುಯಲ್‌ ಫಂಡ್‌ನಲ್ಲಿ ಇನ್ವೆಸ್ಟ್‌ ಮಾಡುತ್ತಾ ಹೋದರೆ 20 ವರ್ಷಕ್ಕೆ ನಿಮಗೆ ದೊಡ್ಡ ಮೊತ್ತ ಬಂದಿರುತ್ತದೆ. ಅಂದರೆ ನೀವು 20 ವರ್ಷಕ್ಕೆ 6 ಲಕ್ಷ ರೂಪಾಯಿ ಕಟ್ಟಿರುತ್ತೀರಿ. ಆದ್ರೆ ನಿಮಗೆ ಬಡ್ಡಿ ರೂಪದಲ್ಲಿ 18 ಲಕ್ಷ ರೂಪಾಯಿ ಬಂದಿರುತ್ತದೆ. ಒಟ್ಟು ನಿಮ್ಮ ಕೈಗೆ 24 ಲಕ್ಷ ರೂಪಾಯಿ ರೂಪಾಯಿ ಸಿಕ್ಕಿರುತ್ತದೆ.

ಇದು ಕಾಂಪೌಂಡ್‌ ಇಂಟ್ರೆಸ್ಟ್‌ ಪವರ್‌!

ನೀವು ದೀರ್ಘಕಾಲ ಹೂಡಿಕೆ ಮಾಡಿದರೆ, ನಿಮ್ಮ ಜೊತೆ ಜೊತೆಗೆ ನಿಮ್ಮ ಹಣ ಕೂಡಾ ನಿಮಗೆ ದುಡಿದುಕೊಡುತ್ತದೆ. ಅಂದರೆ ನೀವು ಆರ್ಥಿಕವಾಗಿ ಸ್ವಾವಲಂಬಿಯಾಗೋದಕ್ಕೆ ನೀವು ಉಳಿತಾಯ ಮಾಡಿದ ಹಣ ಕೂಡಾ ನಿಮಗೆ ನೆರವಾಗಿ ನಿಲ್ಲುತ್ತದೆ. ನಿಮ್ಮ ಪರವಾಗಿ ಅದು ದುಡಿಮೆ ಮಾಡುತ್ತಾ ಹೋಗುತ್ತದೆ.

ನಿಮ್ಮ ಹೂಡಿಕೆ ಹಣಕ್ಕೆ ಬರುವ ಬಡ್ಡಿಗೆ ಬಡ್ಡಿಗೆ ಸೇರಿ ದೀರ್ಘ ಕಾಲದಲ್ಲಿ ಅದು ದೊಡ್ಡ ಮೊತ್ತವಾಗುತ್ತದೆ. ಅಂದರೆ ಹೂಡಿಕೆ ಮಾಡೋದಕ್ಕೂ ಮೊದಲು ನೀವು ಒಬ್ಬರು ದುಡಿಯುತ್ತಿದ್ದರೆ, ಹೂಡಿಕೆ ಶುರುವಾದ ಮೇಲೆ ನಿಮ್ಮ ಜೊತೆಗೆ ಹಣವೂ ಕೂಡಾ ದುಡಿಯೋದಕ್ಕೆ ಶುರು ಮಾಡುತ್ತದೆ. ಅಂದರೆ ಎರಡು ಕಡೆಯಿಂದ ನಿಮಗೆ ಆದಾಯ ಬರೋದಕ್ಕೆ ಶುರುವಾಗುತ್ತದೆ ಎಂದರ್ಥ.

ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿ

ಕಡಿಮೆ ಸಂಪಾದನೆ ಮಾಡುತ್ತಿದ್ದೇವೆ ಎನ್ನುವುದು ವಿಷಯವೇ ಅಲ್ಲ. ನಾವು ಎಷ್ಟು ಉಳಿತಾಯ ಮಾಡುತ್ತಿದ್ದೇವೆ. ಎಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಅನ್ನೋದು ಮುಖ್ಯವಾಗುತ್ತದೆ. ನೀವು ಕಡಿಮೆ ವಯಸ್ಸಿನಲ್ಲಿರುವಾಗಲೇ ಉಳಿತಾಯ ಮಾಡಲು ಶುರು ಮಾಡಿದರೆ ನಿವೃತ್ತಿ ವಯಸ್ಸಿಗೆ ಬರುವ ವೇಳೆ ದೊಡ್ಡ ಮೊತ್ತವನ್ನು ಗಳಿಸಿರುತ್ತೀರಿ. ಯಾಕಂದ್ರೆ ಓದು ಮುಗಿಸಿದ ತಕ್ಷಣ ಕೆಲವರು ಕೆಲಸಕ್ಕೆ ಸೇರುತ್ತಾರೆ. ಸಂಬಳವೇನೋ ಕಡಿಮೆ ಇರುತ್ತದೆ. ಆದ್ರೆ ಖರ್ಚು ಕೂಡಾ ಕಡಿಮೆಯೇ ಇರುತ್ತದೆ. ಯಾಕಂದ್ರೆ ಮದುವೆಯಾಗಿರುವುದಿಲ್ಲ. ಸಂಸಾರವಿರುವುದಿಲ್ಲ.

ನೀವು ಒಬ್ಬರೇ ಆದ್ದರಿಂದ ಬಂದ ಹಣವನ್ನು ಮಜಾ ಮಾಡೋದಕ್ಕೆ, ಸಿನಿಮಾ, ಪಬ್‌ ಇತ್ಯಾದಿಗಳಿಗೆ ಖರ್ಚು ಮಾಡಿಬಿಡುತ್ತೀರಿ. ಅದರ ಬದಲಾಗಿ, ಉಳಿತಾಯ ಮಾಡಲು ಶುರು ಮಾಡಿ ನಿಮಗೆ ಸಮಸ್ಯೆಯೇ ಬರೋದಿಲ್ಲ. ಸಣ್ಣ ವಯಸ್ಸಿನಲ್ಲೇ ಉಳಿತಾಯ ಮಾಡಲು ಶುರು ಮಾಡುವವನು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದೆ ಸಿಗುತ್ತವೆ.

ಡಬ್ಬಿಗಳಲ್ಲಿ ಹಣವನ್ನು ಎತ್ತಿಡಬೇಡಿ

ನೀವು ಗಮನಿಸಬಹುದು. ನೀವು ಚಿಕ್ಕವರಿದ್ದಾಗ ಬಹುತೇಕರ ಮನೆಗಳ ಪರಿಸ್ಥಿತಿಗಳು ಸರಿ ಇರೋದಿಲ್ಲ. ಬಹುತೇಕರ ಪೋಷಕರು ಕೂಲಿ ಮಾಡಿ ಜೀವನ ಮಾಡುತ್ತಿರುತ್ತಾರೆ. ಆದರೂ ಅವರು ಉಳಿತಾಯ ಮಾಡುತ್ತಿರುತ್ತಾರೆ. ಹಾಗೆ ಉಳಿತಾಯ ಮಾಡಿದ ಹಣವನ್ನು ಮನೆಯಲ್ಲಿ ಯಾವುದಾದರೂ ಒಂದು ಡಬ್ಬಿ, ಪೆಟ್ಟಿಗೆ ಮುಂತಾದವುಗಳಲ್ಲಿ ಜೋಡಿಸಿಟ್ಟಿರುತ್ತಾರೆ. ಕಷ್ಟ ಬಂದಾಗ ಸಹಾಯವಾಗುತ್ತದೆ ಎಂಬುದು ಅವರ ಉದ್ದೇಶವಾಗಿರುತ್ತದೆ. ಆದ್ರೆ ಈ ಮನಸ್ಥಿತಿಯಿಂದಲೇ ಬಡವರು ಬಡವರಾಗಿಯೇ ಉಳಿದಿರೋದು.

ಹಣವನ್ನು ನಾವು ಮನೆಯಲ್ಲಿ ಬಚ್ಚಿಟ್ಟರೆ ಅದು ಯಾವ ಕಾರಣಕ್ಕೂ ಮರಿ ಹಾಕೋದಿಲ್ಲ. ನಮ್ಮ ಅದೃಷ್ಟ ನೆಟ್ಟಗಿಲ್ಲ ಅಂದರೆ ಇಲಿಗಳೋ, ಗೆದ್ದಲೋ ಅದನ್ನು ತಿಂದುಬಿಟ್ಟಿರುತ್ತದೆ. ಅದೇ ಹಣವನ್ನು ನೀವು ಎಲ್ಲಾದರೂ ಹೂಡಿಕೆ ಮಾಡಿದರೆ ಅದು ಬೆಳೆಯುತ್ತಾ ಹೋಗುತ್ತದೆ.

ಹಣವನ್ನು ನೀವು ಬಚ್ಚಿಟ್ಟರೆ ಅದು ಮನೆಯಲ್ಲಿ ಯಾವುದೇ ಕೆಲಸ ಮಾಡದೇ ಸುಮ್ಮನೆ ಕೂತಿರುತ್ತಾರಲ್ಲ ಅವರಿಗೆ ಸಮನಾಗುತ್ತದೆ. ಅದೇ ಹಣವನ್ನು ಬ್ಯಾಂಕ್‌ಗಳಲ್ಲೋ, ಇತರೆ ಯಾವುದಾದರೂ ಸುರಕ್ಷತ ಸ್ಥಳದಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಜೊತೆ ಅದೂ ದುಡಿಯುತ್ತಾ ಹೋಗುತ್ತದೆ.

Share Post