A killer turned artist;ಈತ 20 ವರ್ಷಗಳ ಹಿಂದೆ ಕೊಲೆಗಾರ; ಜೈಲಿಂದ ಹೊರಬಂದಾಗ ಕಲೆಗಾರನಾಗಿದ್ದ!
ಮೈಸೂರು; ಬರೋಬ್ಬರಿ ಹದಿನೇಳು ವರ್ಷ ಜೈಲುವಾಸ ಅನುಭವಿಸಿದ ಈತ ಹೊರಗೆ ಬಂದಮೇಲೆ ಅತ್ಯದ್ಭುತ ಕಲಾವಿದನಾಗಿದ್ದಾನೆ. ಜೀವವಿಲ್ಲದ ಮಣ್ಣನ್ನು ಜೀವ ಬಂದಂತೆ ಕಾಣುವ ಬೊಂಬೆಯಾಗಿ ರೂಪಾಂತರಿಸುತ್ತಾನೆ. ನಾಟಕ ಮಾಡುತ್ತಾನೆ, ಆಯುರ್ವೇದ ಕಲಿತಿದ್ದಾನೆ. ಒಟ್ಟಿನಲ್ಲಿ ಪರಿವರ್ತನೆ ಪದಕ್ಕೆ ಅನ್ವರ್ಥವಾಗುತ್ತಾನೆ. (A killer turned artist)
20 ವರ್ಷಗಳ ಹಿಂದೆ ಕೊಲೆಗಾರನಾಗಿ ಜೈಲಿಗೆ!
ಇವರ ಹೆಸರು ನಂಜುಂಡಸ್ವಾಮಿ. 1999ರಲ್ಲಿ ಕೊಲೆ ಆರೋಪದ ಮೇಲೆ ಜೈಲು ಸೇರಿದ ಈತ ಸತತ ಏಳು ವರ್ಷ ನಡೆದ ವಿಚಾರಣೆಯ ನಂತರ ಜೀವಾವಧಿ ಶಿಕ್ಷೆಗೆ ಒಳಗಾಗಿ 17.5 ವರ್ಷ ಜೈಲುವಾಸ ಅನುಭವಿಸಿದ್ದ. ನಂತರ 2017 ಜ.26ರಂದು ಬಿಡುಗಡೆಯಾಗಿದ್ದು ಸಂಪೂರ್ಣ ಹೊಸ ಮನುಷ್ಯನಾಗಿ. (Nanjundaswamy)
ಪ್ರಕರಣದ ಹಿನ್ನೆಲೆ
ತನ್ನ ಊರಿನಲ್ಲಿ ಮದುವೆಯಾಗಿ ಇದ್ದ ಈತನ ವೈವಾಹಿಕ ಜೀವನ ಕೆಲವು ತಿಂಗಳ ನಂತರವೇ ಹಳಸಿತ್ತು. ಒಮ್ಮೆ ತನ್ನ ಪತ್ನಿಯೊಂದಿಗೆ ಮಾತನಾಡಲು ಅತ್ತೆ ಮನೆಗೆ ತೆರಳಿದ್ದಾಗ ಮಾತಿಗೆ ಮಾತು ಬೆಳೆದು ಇವರ ಮಾವ ಮಚ್ಚು ಕೈಗೆತ್ತಿಕೊಳ್ಳುವಂತಾಗಿದೆ. ಎಲ್ಲಿ ತನ್ನನ್ನು ಕೊಲ್ಲುತ್ತಾರೋ ಎಂಬ ಭಯದಲ್ಲಿ ಈತ ಮಾವನ ಕೈಯಲ್ಲಿದ್ದ ಮಚ್ಚು ಕಸಿದುಕೊಂಡು ಅತ್ತೆ, ಮಾವ, ಭಾಮೈದನನ್ನು ಕೊಂದು ಭಾಮೈದನ ಹೆಂಡತಿಯ ಮೇಲೆ ಹಲ್ಲೆ ನಡೆಸುತ್ತಾನೆ. ಇದಕ್ಕಾಗಿ ಜೈಲು ಶಿಕ್ಷೆ ಅನುಭವಿಸುವಂತಾಗುತ್ತದೆ. ಇದಕ್ಕಾಗಿ ಈತನನ್ನು ಎಷ್ಟೋ ಜನ ಮೂರೂವರೆ ನಂಜುAಡ ಎಂದು ಕರೆಯುತ್ತಾರೆ.
ಜೈಲಿನಲ್ಲೇ ಆಯಿತು ಪರಿವರ್ತನೆ
ಓದು, ಬರಹ ಕಲಿಯದ ಈತ ಜೈಲಿನಲ್ಲಿ ಸಹಕೈದಿಗಳ ಸೇರಿ ಓದುವುದು, ಬರೆಯುವುದು ಕಲಿತಿದ್ದು ಇತಿಹಾಸ. ಈಗ ನಂಜುಂಡಸ್ವಾಮಿ ಕವಿತೆ, ಶಾಯಿರಿಗಳನ್ನು ಬರೆಯುವ ಕವಿಯೂ ಹೌದು. ಹಿಂದಿ, ಇಂಗ್ಲಿಷ್ ಭಾಷೆಯನ್ನೂ ತಕ್ಕಮಟ್ಟಿಗೆ ಕಲಿತಿದ್ದಾರೆ. ಒಮ್ಮೆ ಜೈಲಿನಲ್ಲಿ ಹುಲಗಪ್ಪ ಕಟ್ಟಿಮನಿಯವರು ನೀಡುವ ರಂಗತರಬೇತಿಯಲ್ಲಿ ಪಾಲ್ಗೊಂಡಿದ್ದರಿಂದ ಈತ ಇಂದು ಬೀದಿ ನಾಟಕ ಕಲಾವಿದ. ಮುಂಬೈ, ಬೆಂಗಳೂರು, ಮೈಸೂರು ಮುಂತಾದ ಕಡೆ 500ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಹೆಗ್ಗಳಿಕೆ ಈತನದ್ದು.
ನಂಜುಂಡಸ್ವಾಮಿ ಇಷ್ಟು ಮಾತ್ರವಲ್ಲದೆ ಮಣ್ಣಿನ ಗೊಂಬೆಗಳನ್ನು ಮಾಡುವಲ್ಲಿ ನಿಸ್ಸೀಮ. ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದಲ್ಲಿ ಈ ತರಬೇತಿ ಪಡೆದ ನಂಜುಂಡಸ್ವಾಮಿ, ಜೀವವಿರದ ಮಣ್ಣಿನ ಗಟ್ಟಿಗೆ ಒಂದು ರೂಪ ಕೊಟ್ಟು, ಅದರಲ್ಲಿ ಭಾವನೆಗಳು ಕಾಣುವಂತೆ ಮಾಡುವ ಕಲಾವಿದ. ಇಷ್ಟರ ಜೊತೆಗೆ ಈತ ಆಯುರ್ವೇದ ಕಂಪನಿಯೊಂದರಲ್ಲಿ ಉದ್ಯೋಗಿ. ಇಷ್ಟು ಸುಂದರವಾಗಿ ಬದುಕು ಕಟ್ಟಿಕೊಂಡ ನಂತರ ಈಗ ಮತ್ತೊಂದು ಮದುವೆಯಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಪರಿವರ್ತನೆ ಕಷ್ಟವಲ್ಲ, ಅಂದುಕೊಂಡರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿರುವ ನಂಜುಂಡಸ್ವಾಮಿ ಎಷ್ಟೋ ಜನರಿಗೆ ಸ್ಫೂರ್ತಿ.