ಪ್ರೀತಿಸಿದ ಮಗಳ ಮೇಲೆ ಕೋಪ; ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೈಡ್ರಾಮಾ
ಮೈಸೂರು: ಪ್ರೀತಿಸಿದವನನ್ನು ಮದುವೆಯಾಗಲು ಬಂದಿದ್ದ ಯುವತಿಯನ್ನು ಆಕೆಯ ತಂದೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ ಘಟನೆ ಇಲ್ಲಿನ ನಂಜನಗೂಡು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿದೆ. ಈ ವೇಳೆ ಸ್ಥಳೀಯರು ನೆರವಿಗೆ ಬಂದಿದ್ದು, ಯುವತಿಯನ್ನು ತಂದೆಯಿಂದ ಬಿಡಿಸಿದ್ದಾರೆ. ಸದ್ಯ ಯುವತಿ ಈಗ ತನ್ನ ಪ್ರಿಯಕನ ಜೊತೆ ಸೇರಿದ್ದಾಳೆ.
ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದ ಚೈತ್ರ ಹಾಗೂ ಹಲ್ಲರೆ ಗ್ರಾಮದ ಮಹೇಂದ್ರ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಇವರಿಬ್ಬರೂ ಡಿಸೆಂಬರ್ 8 ರಂದು ಮದುವೆ ಆಗಿದ್ದಾರೆ. ಇಂದು ತಮ್ಮ ಮದುವೆಯನ್ನು ನೋಂದಣಿ ಮಾಡಿಸಲು ನಂಜನಗೂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದರು. ಇದನ್ನು ತಿಳಿದು ಸ್ಥಳಕ್ಕಾಗಮಿಸಿದ ಯುವತಿಯ ತಂದೆ, ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಹಾಕಿದ್ದಾರೆ. ಅಲ್ಲಿಂದ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.