Districts

ಭಾವೈಕ್ಯತೆಯ ಪ್ರತಿಪಾದಕ ಇಬ್ರಾಹಿಂ ಸುತಾರ ಇನ್ನಿಲ್ಲ

ಬಾಗಲಕೋಟೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಇಂದು ಮುಂಜಾನೆ 6.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಚನ ಹಾಗೂ ಸೂಫಿ ಪರಂಪರೆಯನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಪ್ರತಿಪಾದಿಸುತ್ತಿದ್ದರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಹಿಂದೂ-ಮುಸ್ಲಿಂ ಭಾವೈಕ್ಯತೆ ಬಗ್ಗೆ ಮಾತನಾಡುತ್ತಿದ್ದ ಇಬ್ರಾಹಿಂ ಸುತಾರ ಅವರು, ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬಡ ಕುಟುಂಬದಲ್ಲಿ 1940ರ ಮೇ 10ರಂದು ಜನಿಸಿದರು. ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ. ಇವರ ತಂದೆ ಬಡಗಿ ವೃತ್ತಿಯನ್ನು ಮಾಡಿಕೊಂಡಿದ್ದು, ಬಡ ಕುಟುಂಬದಲ್ಲಿ ಜನಿಸಿದ ಇಬ್ರಾಹಿಂ ಸುತಾರ ಅವರಿಗೆ ಓದಲು ಸಾಧ್ಯವಾಗಲಿಲ್ಲ. ಓದದಿದ್ದರೂ ಕೂಡಾ ವಚನ ಸಾಹಿತ್ಯ ಹಾಗೂ ಸೂಫಿ ಪರಂಪರೆಯನ್ನು ಸಾಕಷ್ಟು ಅರಿತಿದ್ದರು. ಅದರ ಮೂಲಕ ರಾಜ್ಯದ ನಾನಾ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಈ ಮೂಲಕ ಹಿಂದೂ ಮುಸ್ಲಿಂ ಬಾಂದವ್ಯ ಬೆಸೆಯುವ ಕೊಂಡಿಯಾಗಿದ್ದರು.

ಕೆಲ ವರ್ಷಗಳ ಹಿಂದೆ ಖಾಸಗಿ ಟಿವಿ ಚಾನೆಲ್‌ನಲ್ಲಿ ಭಾವೈಕ್ಯತೆ ಎಂಬ ಪದಕ್ಕೆ ಪರಿಪೂರ್ಣವಾದ ಅರ್ಥವನ್ನು ಹೇಳಿದ್ದರು. ಅದರಂತೆ ಮನುಷ್ಯ ನಡೆದಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಬರುತ್ತದೆ ಹೇಳಿದ್ದರು. ಅವರ ಈ ಮಾತು ಸಾಕಷ್ಟು ವೈರಲ್‌ ಆಗಿತ್ತು. ಇಬ್ರಾಹಿಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Share Post