DistrictsPolitics

ಮಂಡ್ಯ ಉಸ್ತುವಾರಿಯಾಗಲು ನಿರುತ್ಸಾಹ; ಅಶ್ವತ್ಥನಾರಾಯಣ್‌ಗೆ ಕಟ್ತಾರಾ ಪಟ್ಟ..?

ಮಂಡ್ಯ; ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಬಿಜೆಪಿ ಏನೋ ಮಂಡ್ಯದಲ್ಲಿ ಹೆಚ್ಚಿನ ಸೀಟುಗಳನ್ನು ಗಳಿಸಲು ಕಸರತ್ತು ಮಾಡ್ತಿದೆ. ಆದ್ರೆ, ಇದೇ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ಯಾವ ಸಚಿವರೂ ಮುಂದೆ ಬರುತ್ತಿಲ್ಲ. ಇತ್ತೀಚೆಗಷ್ಟೇ ಆರ್‌.ಅಶೋಕ್‌ ಅವರನ್ನು ಮಂಡ್ಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಆದ್ರೆ, ಇದಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಆರ್‌.ಅಶೋಕ್‌ ವಿರುದ್ಧ ಗೋಬ್ಯಾಕ್‌ ಅಭಿಯಾನ ಆರಂಭಿಸಿದ್ದರು. ಹೀಗಾಗಿ ಅಶೋಕ್‌ ಅವರು ಆ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಖಾಲಿಯಾದ ಆ ಸ್ಥಾನವನ್ನು ಅಲಂಕರಿಸಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಬಲವಂತವಾಗಿ ಸಚಿವ ಅಶ್ವತ್ಥನಾರಾಯಣ್‌ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ನಾರಾಯಣಗೌಡರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಅನಂತರ ಗೋಪಾಲಯ್ಯ ಅವರಿಗೆ ಆ ಸ್ಥಾನ ನೀಡಲಾಗಿತ್ತು. ಆದ್ರೆ ತಿಂಗಳ ಹಿಂದೆಯಷ್ಟೇ ಗೋಪಾಲಯ್ಯ ಅವರನ್ನು ಆ ಸ್ಥಾನದಿಂದ ತೆರವು ಮಾಡಿ, ಆರ್‌.ಅಶೋಕ್‌ಗೆ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ನಾರಾಯಣಗೌಡ ಹಾಗೂ ಗೋಪಾಲಯ್ಯ ಕೂಡಾ ಮಂಡ್ಯ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಉಸ್ತುವಾರಿ ವಹಿಸಿಕೊಂಡರೆ ಜಿಲ್ಲೆಯಾದ್ಯಂತ ಸುತ್ತಾಡಬೇಕಾಗುತ್ತದೆ. ಆಗ ಸ್ವಕ್ಷೇತ್ರದ ಮೇಲೆ ಗಮನ ಕೊಡೋದಕ್ಕೆ ಆಗೋದಿಲ್ಲ. ಹೀಗಾಗಿ ಉಸ್ತುವಾರಿ ಬೇಡ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ಈ ಎಲ್ಲದರ ನಡುವೆ ಬಿಜೆಪಿ ಹೈಕಮಾಂಡ್‌ ಸಚಿವ ಅಶ್ವತ್ಥನಾರಾಯಣ ಅವರನ್ನು ಮಂಡ್ಯ, ರಾಮನಗರ ಭಾಗದಲ್ಲಿ ಒಕ್ಕಲಿಗ ನಾಯಕನೆಂದು ಬಿಂಬಿಸಲು ಹೊರಟಿದೆ. ಹೆಚ್ಡಿಕೆ ಹಾಗೂ ಡಿ.ಕೆ.ಶಿವಕುಮಾರ್‌ ಗೆ ಸೆಡ್ಡು ಹೊಡೆಯಲು ಅಶ್ವತ್ಥನಾರಾಯಣ್‌ ಅವರೇ ಸೂಕ್ತ ಎಂದು ಬಿಜೆಪಿ ಹೈಕಮಾಂಡ್‌ ನಂಬಿದೆ. ಈ ಕಾರಣಕ್ಕಾಗಿ ಮಂಡ್ಯ ಜಿಲ್ಲಾ ಉಸ್ತುವಾರಿಯ ಹೊಣೆಯನ್ನು ಅಶ್ವತ್ಥನಾರಾಯಣ್‌ ಅವರ ಹೆಗಲಿಗೆ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

Share Post