ಬಿ.ಕೆ.ಹರಿಪ್ರಸಾದ್‌ಗೆ ಯಾವುದೇ ನೋಟಿಸ್ ನೀಡೋದಿಲ್ಲ; ಗೃಹಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು; ರಾಮಮಂದಿರ ಉದ್ಘಾಟನೆ ದಿನ ಗೋಧ್ರಾ ರೀತಿಯ ದುರಂತ ನಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈ ಸಂಬಂಧ ಹರಿಪ್ರಸಾದ್ ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡೋದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹರಿಪ್ರಸಾದ್ ಕೊಟ್ಟಿರುವ ಹೇಳಿಕೆ ಬಗ್ಗೆ ಗೃಹ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಅಂತಹ ಯಾವುದೇ ದುರ್ಘಟನೆ ನಡೆಯುವ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ಒಂದು ವೇಳೆ ಅಂತಹ ಪ್ರಯತ್ನಗಳು ನಡೆಯೋ ಮಾಹಿತಿ ಬಂದರೆ ನಾವು ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋದು ಗೊತ್ತು. ನಾವು ಯಾವುದೇ ಕಾರಣಕ್ಕೂ ಅಂತಹ ಘಟನೆಗಳು ಮರುಕಳಿಸೋದಕ್ಕೆ ಬಿಡೋದಿಲ್ಲ. ನಮ್ಮ ಇಲಾಖೆ ಸಮರ್ಥವಾಗಿದೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಹಲವಾರು ಮಂದಿ ಇಂತಹ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಎಲ್ಲರಿಗೂ ನೋಟಿಸ್ ಕೊಡೋಕೆ ಆಗೋದಿಲ್ಲ. ಹೀಗಾಗಿ ಹರಿಪ್ರಸಾದ್ ಅವರಿಗೂ ನಾವು ನೋಟಿಸ್ ಜಾರಿ ಮಾಡೋದಿಲ್ಲ. ಬದಲಾಗಿ ಅಗತ್ಯ ಬಿದ್ದರೆ ಅವರನ್ನು ಕರೆದು ಈ ಬಗ್ಗೆ ಅವರ ಬಳಿ ಇರುವ ಮಾಹಿತಿ ಕೇಳುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.