ಬ್ಯಾಂಕ್ ಸರ್ವರ್ ಹ್ಯಾಕ್, 12 ಕೋಟಿ ಲೂಟಿ; ನಿಮ್ಮ ಹಣ ಸೇಫಾಗಿದೆಯಾ..?
ಸಹಕಾರಿ ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿರುವ ಸೈಬರ್ ಕಳ್ಳರು 12 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಸೈಬರ್ ಠಾಣೆ ಪೊಲೀಸರು ದೂರು ನೀಡಿದ್ದಾರೆ.
ಹೈದರಾಬಾದ್: ಹೌದು, ಈ ಘಟನೆ ನಡೆದಿರೋದು ಹೈದರಾಬದ್‌ನಲ್ಲಿ. ಇಲ್ಲಿನ ಆಂಧ್ರಪ್ರದೇಶ ಮಹೇಶ್ ಕೋ ಆಪರೇಟಿವ್ ಬ್ಯಾಂಕ್‌ಗೆ ಸೈಬರ್ ಕಳ್ಳರು ಕನ್ನ ಹಾಕಿದ್ದಾರೆ. ಈ ಬ್ಯಾಂಕ್‌ನಲ್ಲಿ ಸರ್ವರ್‌ಗಳನ್ನು ಹ್ಯಾಕ್ ಮಾಡಿದ್ದು, ಬರೋಬ್ಬರಿ 12 ಕೋಟಿ ರೂಪಾಯಿಯನ್ನು ಎಗರಿಸಿದ್ದಾರೆ. ಇದೆಲ್ಲಾ ಕ್ಷಣಾರ್ಧದಲ್ಲಿ ನಡೆದುಹೋಗಿದೆ. ಆದ್ರೆ ಬ್ಯಾಂಕ್ ಆಂತರಿಕ ಪರಿಶೀಲನೆ ವೇಳೆಯಲ್ಲಿ ಈ ವಿಷಯ ಗೊತ್ತಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಹಕರು ಕಂಗಾಲಾಗಿದ್ದಾರೆ.
ಸೈಬರ್ ಕಳ್ಳರು ಸರ್ವರ್‌ಗಳನ್ನು ಹ್ಯಾಕ್ ಮಾಡಿದ್ದು, ನಂತರ ನೂರಕ್ಕೂ ಹೆಚ್ಚು ಖಾತೆಗಳಿಗೆ ಲಾಗ್ ಇನ್ ಆಗಿದ್ದಾರೆ. ಆ ಖಾತೆಗಳಲ್ಲಿದ್ದ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಖಾತೆಗಳಲ್ಲಿದ್ದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಬ್ಯಾಂಕ್ ಖಾತೆಗಳ ಆಂತರಿಕ ಪರಿಶೀಲನೆ ವೇಳೆ ಹ್ಯಾಕ್ ಮಾಡಿ 12 ಕೋಟಿ ರೂಪಾಯಿ ಎಗರಿಸಿರುವುದು ತಿಳಿದುಬಂದಿದೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಕೋ ಆಪರೇಟಿವ್ ಬ್ಯಾಂಕ್ ಆಂಧ್ರಪ್ರದೇಶ ಸೇರಿ ನಾಲ್ಕು ರಾಜ್ಯಗಳಲ್ಲಿ 45 ಬ್ರಾಂಚ್‌ಗಳನ್ನು ಹೊಂದಿದೆ. ವಿವಿಧ ಬ್ರಾಂಚ್‌ಗಳಲ್ಲಿ ಅತಿಹೆಚ್ಚು ರೇವಣಿ ಇಟ್ಟಿರುವವರ ಖಾತೆಗಳನ್ನು ಗುರುತಿಸಿ ಈ ಕೃತ್ಯ ಎಸಗಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣವನ್ನು ಯಾವ ಖಾತೆಗಳಿಗೆ ವರ್ಗಾಯಿಸಲಾಗಿದೆ. ಆ ಖಾತೆಗಳು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.