Crime

ʻಬುಲ್ಲಿ ಬಾಯ್ʼ ಮೊಬೈಲ್‌ ಅಪ್ಲಿಕೇಷನ್‌ ಕೇಸ್‌: ಬೆಂಗಳೂರಿನ ವಿದ್ಯಾರ್ಥಿ ವಿಚಾರಣೆ

ಮುಂಬೈ; ಬುಲ್ಲಿ ಬಾಯ್‌‌ ಹೆಸರಿನ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ತಿರುಚಿ ಪ್ರಕಟಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬನನ್ನು ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿ ವಿಚಾರಣೆ ನಡೆಸುತ್ತಿದ್ದಾರೆ. ಮುಂಬೈನ ಸೈಬರ್‌ ಸೆಲ್‌ ಪೊಲೀಸರು ೨೧ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಮೊಬೈಲ್‌ ಅಪ್ಲಿಕೇಷನ್‌ ಗಿಟ್‌ ಹಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಸಿಗುತ್ತಿದ್ದು, ಇದರಲ್ಲಿ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಮುಸ್ಲಿಂ ಮಹಿಳೆಯರ ಫೋಟೋಗಳನ್ನು ತಿರುಚಿ ಪ್ರಕಟಿಸಲಾಗುತ್ತಿದೆ ಎಂದು ಪತ್ರಕರ್ತೆಯೊಬ್ಬರು ಟ್ವೀಟ್‌ ಮಾಡಿದ್ದರು. ಈ ಬಗ್ಗೆ ಮಹಾರಾಷ್ಟ್ರದ ರಾಜಕಾರಣಿಯೊಬ್ಬರು ಗೃಹ ಇಲಾಖೆಗೆ ದೂರು ಕೂಡಾ ನೀಡಿದ್ದರು. ಇದಾದ ಮೇಲೆ ಹೈದರಾಬಾದ್‌ ಮಹಿಳೆಯೊಬ್ಬರು ಕೂಡಾ ನನ್ನ ಫೋಟೋಗಳನ್ನೂ ಬುಲ್ಲಿ ಬಾಯ್‌ ಅಪ್ಲಿಕೇಷನ್‌ನಲ್ಲಿ ಬಳಸಲಾಗಿದೆ ಎಂದು ದೂರಿದ್ದರು. ದೆಹಲಿಯಲ್ಲೂ ಕೂಡಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಸೈಬರ್‌ ಸೆಲ್‌ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಸಂಬಂಧ ಅನುಮಾನದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಪೊಲೀಸರ ಸಹಾಯದೊಂದಿಗೆ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿಸಿರುವ ಮುಂಬೈ ಪೊಲೀಸರು, ಆತನನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಂದ ಬಾಯಿಬಿಡಿಸುವ ಕೆಲಸ ಮಾಡುತ್ತಿದ್ದಾರೆ.

Share Post