ಮಗುವಿನ ಮೇಲೆ ಅಮಾನುಷ ಹಲ್ಲೆಗೈದ ತಾಯಿ ವಿರುದ್ಧ ಎಫ್ಐಆರ್
ಬೆಂಗಳೂರು: ಹೆತ್ತ ತಾಯಿಯೇ ತನ್ನ ಮೂರುವರೆ ವರ್ಷದ ಮಗನಿಗೆ ಅಮಾನುಷವಾಗಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೂಚನೆ ಮೇರೆಗೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಹಲ್ಲೆಗೈದ ಶಾರಿನ್ ಎಂಬ ಮಹಿಳೆ ಮತ್ತು ಆಕೆಯ ಪ್ರಿಯಕರನ ವಿರುದ್ಧ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಹಲ್ಲೆಗೀಡಾದ ಮೂರುವರೆ ವರ್ಷದ ಸ್ಟಾಲಿನ್ ಎಂಬ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಸದ್ಯ ಸರ್ಕಾರಿ ಶಿಶುಮಂದಿರದಲ್ಲಿ ಪಾಲನೆ ಮಾಡಲಾಗುತ್ತಿದೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಹತ್ತಿರದ ಡಾ. ಎಂ.ಎಚ್. ಮರೀಗೌಡ ರಸ್ತೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಆರ್. ನಾಗರತ್ನ ಹಾಗೂ ರಾಜೇಶ್ವರಿ ಅವರು ನೀಡಿದ ದೂರಿನ್ವಯ ಗಿರಿನಗರ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಈ ಘಟನೆಯು ಫೆಬ್ರವರಿ 20ರಂದು ಬೆಂಗಳೂರಿನ ಬನಶಂಕರಿ 3ನೇಹಂತದ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ನಡೆದಿದೆ. ಆರೋಪಿ ತಾಯಿ ಶಾರಿನ್ ವೀರಭದ್ರನಗರದ ಚರ್ಚ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಮೂರುವರೆ ವರ್ಷದ ಮಗು ಸ್ಟಾಲಿನ್ ನೊಂದಿಗೆ ಇದ್ದಳು. ಮನೆಗೆ ಒಬ್ಬ ವ್ಯಕ್ತಿ ಪ್ರತಿನಿತ್ಯ ಬಂದು ಹೋಗುತ್ತಿದ್ದು, ಅವನೊಂದಿಗೆ ಶಾರಿನ್ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಹೇಳಲಾಗಿದೆ.
ಮಗು ಸ್ಟಾಲಿನ್ ಗೆ ತಾಯಿ ಶಾರಿನ್, ಪ್ರಿಯಕರನೊಂದಿಗೆ ಸೇರಿಕೊಂಡು ಮನಬಂದಂತೆ ದಿನನಿತ್ಯ ಹಲ್ಲೆ ನಡೆಸುತ್ತಿದ್ದಳು. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ; ಬೀಗ ಹಾಕಿ ಹೋಗುತ್ತಿದ್ದಳು. ಈ ವಿಷಯ ತಿಳಿದು ನೆರೆಹೊರೆಯ ದೂರಿನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಗು ಸ್ಟಾಲಿನ್ ನನ್ನು ರಕ್ಷಿಸಿದ್ದರು. ಆದರೆ, ತಾಯಿ ಶಾರಿನ್ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ.
ಘಟನೆ ಕುರಿತಂತೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದೊಂದು ಅಮಾನುಷ ಕೃತ್ಯವಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಚಿವರು, ಇಲಾಖಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಆದೇಶದ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ; ಮಗುವನ್ನು ರಕ್ಷಿಸಲಾಗಿದೆ.
ಹಲ್ಲೆಗೈದ ತಾಯಿ ಶಾರಿನ್ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಗಿರಿನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.