ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಹರ್ಭಜನ್ ಸಿಂಗ್ ಪತ್ನಿ ನಾಯಕಿ
ಮುಂಬೈ; ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಇದೀಗ ಹಿಂದಿ ಹಾಗೂ ಬೆಂಗಾಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾ ಹೆಸರು ನೋಟರಿ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ನಾಯಕಿಯಾಗಿ ನಟಿಸುತ್ತಿರುವುದು. ಪರಂಬ್ರತಾ ಚಟ್ಟೋಪಾಧ್ಯಾಯ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ವಿಜಯದಶಮಿಯಂದು ಸಿನಿಮಾ ಸೆಟ್ಟೇರಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ. ಭೋಪಾಲ್ ನಲ್ಲಿ 20 ದಿನಗಳ ಚಿತ್ರೀಕರಣ ನಂತರ ಮುಂಬೈನಲ್ಲಿ ‘ನೋಟರಿ’ ಸಿನಿಮಾ ಚಿತ್ರೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ.
ಚಿತ್ರದಲ್ಲಿ ನಾಯಕ ಸುಳ್ಳು ಹೇಳುವುದಿಲ್ಲ. ಆದ್ರೆ ಅವರು ಕೆಲಸ ಮಾಡುವ ಕ್ಷೇತ್ರದಲ್ಲಿ ದಿನಾ ಒಂದಿಲ್ಲೊಂದು ಸುಳ್ಳು ಹೇಳಬೇಕಾದ ಪರಿಸ್ಥಿತಿ ಇರುತ್ತೆ. ಇದನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಅನ್ನೋದೇ ಚಿತ್ರದ ಕಥೆ. ಹಾಸ್ಯಪ್ರಧಾನವಾದ ಚಿತ್ರ ಇದು ಎಂದು ಚಿತ್ರತಂಡ ತಿಳಿಸಿದೆ.