CrimeDistricts

ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣ; ಇಬ್ಬರು ಆರೋಪಿಗಳಿಗೆ 25 ವರ್ಷ ಜೈಲು

ಗದಗ; ಎರಡು ಪ್ರತ್ಯೇಕ ಪೋಕ್ಸೊ ಪ್ರಕರಣಗಳಲ್ಲಿ ಆರೋಪ ಸಾಬೀತಾದ ಕಾರಣ ಇಬ್ಬರೂ ಅಪರಾಧಿಗಳಿಗೆ ತಲಾ 25 ವರ್ಷ ಜೈಲು ಶಿಕ್ಷೆ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಜೊತೆಗೆ ಸಂತ್ರಸ್ತೆಯರಿಗೆ 15.10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.

2019ರಲ್ಲಿ ವೆಂಕಟೇಶ ದೊಡ್ಡಶಿವಪ್ಪ ಶಾವಿ ಎಂಬ ವ್ಯಕ್ತಿ ಗಣೇಶ ಚತುರ್ಥಿ ಸಂದರ್ಭದಲ್ಲಿ 12 ವರ್ಷದ ಬಾಲಕಿಗೆ 20 ರೂಪಾಯಿ ನೀಡುವ ಆಮಿಷವೊಡ್ಡಿ ಪಾಳುಬಿದ್ದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆ ಸಿಪಿಐ ಆಗಿದ್ದ ವೆಂಕಟೇಶ ಯಡಹಳ್ಳಿ 2019 ಅ.25ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 25 ವರ್ಷ ಜೈಲು, 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಮೂರು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಇನ್ನು ಬೆಟಗೇರಿ ಸಮೀಪದ ನಾಗಸಮುದ್ರ ಗ್ರಾಮದಲ್ಲಿ 2019ರಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗೂ 25 ವರ್ಷ ಜೈಲು ಹಾಗೂ ಸಂತ್ರಸ್ತ ಬಾಲಕಿಗೆ 1.10 ಲಕ್ಷ ದಂಡವಾಗಿ ಪಾವತಿಸುವಂತೆ ತೀರ್ಪು ನೀಡಿದೆ. ಅಲ್ಲದೇ ಸಂತ್ರಸ್ತ ಬಾಲಕಿಯ ಪುನರ್ವಸತಿ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚವಾಗಿ ನ್ಯಾಷನಲ್ ಲೀಗಲ್ ಸರ್ವಿಸ್ ಅಥಾರಿಟಿ ಇಬ್ಬರು ಸಂತ್ರಸ್ತೆಯರಿಗೂ ತಲಾ ಆರು ಲಕ್ಷ ನೀಡಲು ಸೂಚಿಸಲಾಗಿದೆ.

Share Post