National

ಗೋವಾದಲ್ಲಿ ಪ್ರಮೋದ್‌ ಸಾವಂತ್‌ ಸಿಎಂ ಆಗಿ ಮುಂದುವರಿಕೆ: ಅಧಿಕೃತ ಘೋಷಣೆ

ಗೋವಾ:   ಬಿಜೆಪಿ ನಾಯಕ ಮತ್ತು ಹಾಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಸಿಎಂ ಆಗಿ ಮುಂದುವರೆಸಲು ಬಿಜೆಪಿ ನಾಯಕತ್ವ ನಿರ್ಧರಿಸಿದೆ. ಈ ಬಗ್ಗೆ ಗೋವಾ ರಾಜ್ಯ ಬಿಜೆಪಿ ವ್ಯವಹಾರಗಳ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ಸಂಸದ ನರೇಂದ್ರ ತೋಮರ್ ಸೋಮವಾರ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಸಾವಂತ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಮೋದ್ ಸಾವಂತ್ ತಮ್ಮ ಮೇಲೆ ನಂಬಿಕೆ ಇಟ್ಟ ಶಾಸಕರಿಗೆ ಮತ್ತು ಕೇಂದ್ರದ ನಾಯಕರಿಗೆ ತಮ್ಮ ಹೆಸರನ್ನು ಸಿಎಂ ಅಭ್ಯರ್ಥಿಯಾಗಿ ಶಿಫಾರಸು ಮಾಡಿದವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಿ ಮೋದಿ ಅವರು ಅಳವಡಿಸಿಕೊಂಡಿರುವ ಅಭಿವೃದ್ಧಿ ದೃಷ್ಟಿಕೋನವನ್ನು ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದು ಪ್ರಮೋದ್ ಸಾವಂತ್ ಹೇಳಿದರು.

ಬಿಜೆಪಿಯ ಹಿರಿಯ ನಾಯಕ ಹಾಗೂ ಸಂಸದ ನರೇಂದ್ರ ಸಿಂಗ್ ತೋಮರ್ ನೇತೃತ್ವದ ಬಿಜೆಪಿ ರಾಷ್ಟ್ರೀಯ ತಂಡ ಸೋಮವಾರ ಗೋವಾಕ್ಕೆ ಆಗಮಿಸಿ ಸಿಎಂ ಅಭ್ಯರ್ಥಿಯಾಗಿ ಸಾವಂತ್‌ ಅವರನ್ನೇ ಮುಂದುವರೆಸುವಂತೆ ನಿರ್ಧರಿಸಿದರು. ಇವರ ಜೊತೆ ಗೋವಾ ರಾಜ್ಯ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವಿಸ್, ಇತರ ನಾಯಕರು ಮತ್ತು ಬಿಜೆಪಿ ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಗೋವಾದಲ್ಲಿ ಶೀಘ್ರದಲ್ಲೇ ಸ್ವತಂತ್ರ ಸರ್ಕಾರ ರಚಿಸುವುದಾಗಿ ನರೇಂದ್ರ ಸಿಂಗ್ ತೋಮರ್ ಘೋಷಿಸಿದ್ದಾರೆ. ಗೋವಾದಲ್ಲಿ ಒಟ್ಟು 40 ವಿಧಾನಸಭಾ ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪ್ರಮೋದ್ ಸಾವಂತ್ ಎರಡನೇ ಅವಧಿಗೆ ಸಿಎಂ ಆಗಿದ್ದು, ಗೋವಾದಲ್ಲಿ ಬಿಜೆಪಿ ಸತತ ಮೂರು ಬಾರಿ ಸರ್ಕಾರ ರಚಿಸಿದೆ.

Share Post