BengaluruCrime

ಜಾರಿ ಬಿತ್ತು ಮೊಬೈಲ್‌; ಮೆಟ್ರೋ ಟ್ರ್ಯಾಕ್‌ಗೆ ಹಾರಿ ಮಹಿಳೆಯ ಅವಾಂತರ!

ಬೆಂಗಳೂರು; ಮೆಟ್ರೋ ರೈಲಿಗಾಗಿ ಕಾದು ನಿಂತಿದ್ದಾಗ ಮೊಬೈಲ್‌ ಜಾರಿ ಟ್ರ್ಯಾಕ್‌ಗೆ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಮಹಿಳೆಯೊಬ್ಬರು ಟ್ರ್ಯಾಕ್‌ಗೆ ಇಳಿದು ಅವಾಂತರ ಸೃಷ್ಟಿಸಿದ್ದಾರೆ. ಬೆಂಗಳೂರಿನ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಕಳೆದ ಸಂಜೆ 6.40ರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಮೆಟ್ರೋ ಟ್ರ್ಯಾಕ್‌ನಲ್ಲಿ ವಿದ್ಯುತ್‌ ಸಂಪರ್ಕ ಇರುತ್ತದೆ. ಹೀಗಾಗಿ ಇಳಿದರೆ ಪ್ರಾಣಕ್ಕೇ ಕುತ್ತಾಗುವ ಅಪಾಯವಿರುತ್ತದೆ. ಆದ್ರೆ ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾರೆ. ಮೆಟ್ರೋ ಸಿಬ್ಬಂದಿ ಮಹಿಳೆ ಟ್ರ್ಯಾಕ್‌ಗೆ ಇಳಿಯುತ್ತಿದ್ದಂತೆ ಕೂಡಲೇ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದಾರೆ. ಇದರಿಂದಾಗಿ ಮಹಿಳೆ ಬಚಾವಾಗಿದ್ದಾರೆ.

ಈ ಕಾರಣದಿಂದಾಗಿ ಈ ಮಾರ್ಗದಲ್ಲಿ ಹದಿನೈದು ನಿಮಿಷಗಳ ಕಾಲ ಸಂಚಾರ ಅಸ್ತ್ರವ್ಯಸ್ತವಾಗಿತ್ತು. ವಿದ್ಯುತ್ ತೆಗೆದ ನಂತರ ಎಲ್ಲವನ್ನೂ ರೀಸೆಟ್ ಮಾಡಲು 15 ನಿಮಿಷ ಬೇಕಾಯಿತು. ಪೀಕ್‌ ಅವರ್‌ನಲ್ಲಿ ಈ ಅವಾಂತರ ನಡೆದಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು.

Share Post