ಅಕ್ರಮ ಹಿನ್ನೆಲೆ; ಪಿಎಸ್‌ಐ ನೇಮಕಾತಿಗಾಗಿ ಮರುಪರೀಕ್ಷೆ
ಬೆಂಗಳೂರು; 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಮರುಪರೀಕ್ಷೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಪ್ರಕರಣ ಸಂಬಂಧ ತನಿಖಾ ತಂಡ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದೆ. ನೇಮಕಾತಿ ಪರೀಕ್ಷೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಲಿಖಿತ ಪರೀಕ್ಷೆ ಪಾರದರ್ಶಕವಾಗಿ ನಡೆದಿಲ್ಲ, ದೈಹಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿಗೆ ಮರುಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ 54 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆರೋಪಿತರನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಮರುಪರೀಕ್ಷೆ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪ್ರಕರಣದ ಕ್ವೀನ್‌ಪಿನ್ ದಿವ್ಯಾ ಹಾಗರಗಿಯನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದ ಪುಣೆಯ ಹೋಟೆಲೊಂದರಲ್ಲಿ ಬಂಧಿಸಿದ್ದಾರೆ. ಹಾಗರಗಿಯನ್ನು ಕಲಬುರಗಿಗೆ ಕರೆತಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ದಿವ್ಯಾ ಜೊತೆಗಿದ್ದ ಮತ್ತೊಬ್ಬ ಆರೋಪಿಯನ್ನು ಸಹ ಸಿಐಡಿ ಬಂಧಿಸಿದೆ.