ಆನೆ ದಾಳಿಗೆ ಕೇರಳದಲ್ಲಿ ವ್ಯಕ್ತಿ ಸತ್ತರೆ, ಕರ್ನಾಟಕದಿಂದ ಪರಿಹಾರ; ವಿಪಕ್ಷಗಳ ಆಕ್ರೋಶ
ಬೆಂಗಳೂರು; ರಾಜ್ಯದಲ್ಲಿ ಬರ ಪರಿಹಾರಕ್ಕೆ ಸರ್ಕಾರದ ಬಳಿ ಹಣ ಇಲ್ಲ. ಆದ್ರೆ ಆನೆ ದಾಳಿಗೆ ಕೇರಳದಲ್ಲಿ ವ್ಯಕ್ತಿ ಸತ್ತರೆ, ಅದಕ್ಕೆ ಕರ್ನಾಟಕ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿ ಬೀಳುತ್ತಿವೆ. ಸಚಿವ ಈಶ್ವರ ಖಂಡ್ರೆ ಅವರು ರಾಹುಲ್ ಗಾಂಧಿಗೆ ಬರೆದ ಪತ್ರ ವೈರಲ್ ಆಗಿದ್ದು, ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರವನ್ನು ಲೇವಡಿ ಮಾಡುತ್ತಿದ್ದಾರೆ.
ಈ ಬಗ್ಗೆ ಬಿಜೆಪಿ ನಾಯಕ ಬಸನನಗೌಡ ಪಾಟೀಲ್ ಯತ್ನಾಳ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಹಲವು ನಾಯಕರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ನಡೆದಿದ್ದೇನು..?;
ನಡೆದಿದ್ದೇನು..?; ಕೇರಳದ ವಯನಾಡಿನಲ್ಲಿ ಆನೆ ದಾಳಿಗೆ ರೈತನೊಬ್ಬ ಸಾವನ್ನಪ್ಪಿದ್ದ. ಇದೇ ವೇಳೆ ಅಲ್ಲಿನ ಅರಣ್ಯ ಸಚಿವ ಕರ್ನಾಟಕದಿಂದ ಬಂದ ಆನೆ ರೈತನನ್ನು ತುಳಿದು ಸಾಯಿಸಿದೆ ಎಂದು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸ್ಥಳೀಯ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡಿಗೆ ಭೇಟಿ ಕೊಟ್ಟಿದ್ದಾರೆ. ಆನೆಯಿಂದ ಸಾವಿಗೀಡಾದ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಆನೆ ಕರ್ನಾಟಕದಿಂದ ಬಂದಿದ್ದರಿಂದ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದರಂತೆ. ಇದಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ 15 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದೆ. ಇದೇ ಮೊದಲ ಬಾರಿಗೆ ಬೇರೆ ರಾಜ್ಯದಲ್ಲಿ ಮೃತಪಟ್ಟ ವ್ಯಕ್ತಿಗೆ ಈ ರೀತಿ ಪರಿಹಾರ ನೀಡಲಾಗುತ್ತಿದೆ. ರಾಹುಲ್ ಗಾಂಧಿಯನ್ನ ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ವಿಪಕ್ಷಗಳು ಆರೋಪ ಮಾಡುತ್ತಿವೆ.
ರಾಹುಲ್ ಗಾಂಧಿಗೆ ಪತ್ರ ಬರೆದ ಈಶ್ವರ್ ಖಂಡ್ರೆ;
ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೇರಳ ರೈತನಿಗೆ ಪರಿಹಾರ ಬಿಡುಗಡೆ ಮಾಡಿರುವ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿಯವರೆ, ನಿಮ್ಮ ಸಲಹೆ ಮೇರೆ ಕರ್ನಾಟಕ ಸರ್ಕಾರ ವಯನಾಡಿನಲ್ಲಿ ಆನೆದಾಳಿಗೆ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಸಲಹೆಯನ್ನು ವೇಣುಗೋಪಾಲ್ ಅವರು ನನಗೆ ದೂರವಾಣಿ ಮೂಲಕ ತಿಳಿಸಿದರು. ಹೀಗಾಗಿ ನಾನು ಸಿಎಂ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿದೆ. ಅವರ ಒಪ್ಪಿಗೆ ಪಡೆದು ಸಂತ್ರಸ್ತನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ರೈತನನ್ನು ಕೊಂದಿದ್ದ ಆನೆ ಹಾಸನದ ಬೇಲೂರಿನಿಂದ ಸೆರೆ ಹಿಡಿದು ಬಂಡೀಪುರದಲ್ಲಿ ಬಿಟ್ಟಿದ್ದ ಟಸ್ಕರ್ ಆನೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.