ಡಿ.ಕೆ.ಶಿವಕುಮಾರ್ ಸವಾಲಿಗೆ ನಾನು ಸಿದ್ಧ; ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು; ರಾಮನಗರ ಜಿಲ್ಲೆಯ ವಿಚಾರವಾಗಿ ಬಹಿರಂಗ ಚರ್ಚೆಗೆ ಬರುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸವಾಲು ಎಸೆದಿದ್ದರು. ಈ ಸವಾಲನ್ನು ಕುಮಾರಸ್ವಾಮಿ ಸ್ವೀಕಾರ ಮಾಡಿದ್ದಾರೆ. ರಾಮನಗರ ಜಿಲ್ಲೆ ರಚನೆ ವಿಚಾರವಾಗಿ ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಪಲಾಯನ ಮಾಡಲ್ಲ, ನನ್ನ ಬಳಿಯೂ ಸಾಕಷ್ಟು ಸರಕು ಇದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ಮಾಡಿದ್ದಾರೆ. ಅದರ ಸಂಬಂಧ ಎರಡು ಮೂರು ವಿಚಾರಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನಗೆ ಸವಾಲು ಹಾಕಿದ್ದಾರೆ. ಅವರ ಸವಾಲು ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೆಚ್ಡಿಕೆ ಹೇಳಿದರು.