Politics

ಟಿಕೆಟ್‌ ಕೊಡ್ತೇವೆಂದರೂ ಮಹಿಳೆಯರು ಯಾರೂ ಬರ್ತಿಲ್ಲ; ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಆಘಾತ

ಲಖನೌ : ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಆಘಾತವಾಗಿದೆ. ಯಾಕಂದ್ರೆ, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಕಾಂಗ್ರೆಸ್‌ ಡೆಡ್‌ಲೈನ್‌ ನೀಡಿತ್ತು. ಈ ಸಮಯದಲ್ಲಿ ಕೇವಲ 18 ಮಹಿಳೆಯರು ಮಾತ್ರ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

    ಕಾಂಗ್ರೆಸ್‌ನ ಉತ್ತರ ಪ್ರದೇಶ ರಾಜ್ಯ  ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚೆಗೆ ನಡೆದ ಪ್ರಚಾರ ಸಭೆಯಲ್ಲಿ ಮಹಿಳೆ ಶೇಕಡಾ 40ರಷ್ಟು ಟಿಕೆಟ್‌ಗಳನ್ನು ನೀಡುವ ಘೋಷಣೆ ಮಾಡಿದ್ದರು.  ಅಲ್ಲದೇ, ‘ನಾನೊಬ್ಬ ಹುಡುಗಿ, ನಾನು ಹೋರಾಡಬಲ್ಲೆ’ ಎಂಬ ಘೋಷವಾಕ್ಯವನ್ನೂ ಮೊಳಗಿಸಿದ್ದರು. ಅನಂತರ ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಇದುವರೆಗೆ ಮಹಿಳೆಯರು ಕೇವಲ 18 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಲಖನೌ ಸೆಂಟ್ರಲ್‌ನ 15 ಸ್ಪರ್ಧಿಗಳಲ್ಲಿ 7 ಮಹಿಳೆಯರು, ಮೋಹನ್‌ಲಾಲ್‌ಗಂಜ್‌ನಲ್ಲಿ 3, ಪೂರ್ವದಲ್ಲಿ 3, ಕ್ಯಾಂಟ್‌ನಲ್ಲಿ 2 ಮತ್ತು ಉತ್ತರದಿಂದ ಇಬ್ಬರು ಮಹಿಳೆಯರು ಮಾತ್ರ ಅರ್ಜಿ ಹಾಕಿದ್ದಾರೆ.

   ಮಹಿಳಾ ಅರ್ಜಿದಾರರ ಕೊರತೆ ಇರುವ ಕಾರಣ, ಹುರಿಯಾಳುಗಳನ್ನು ಹುಡುಕುವುದೇ ಕಾಂಗ್ರೆಸ್ಸಿಗೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಘೋಷಣೆ ಮಾಡಿ ಆಗಿದೆ. ಈ ಅಭ್ಯರ್ಥಿಗಳನ್ನು ಎಲ್ಲಿ ಹುಡುಕುವುದು ಎಂಬ ಚಿಂತೆಯಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು.
Share Post