ಮೂರನೇ ಪಟ್ಟಿಗಾಗಿ ಕಾಂಗ್ರೆಸ್ ಕಸರತ್ತು; ದೆಹಲಿಯಲ್ಲಿ ಸತತ ಸಭೆ
ನವದೆಹಲಿ; ರಾಜ್ಯ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಈ ನಡುವೆ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕೂಡಾ ಬಿಸಿಯೇರಿದೆ. ಕಾಂಗ್ರೆಸ್ ಈಗಾಗಲೇ ಎರಡು ಪಟ್ಟಿಯನ್ನು ರಿಲೀಸ್ ಮಾಡಿದೆ. ಇನ್ನು 58 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಬೇಕಿದೆ. ಇದಕ್ಕಾಗಿ ಕಾಂಗ್ರೆಸ್ ಕಸರತ್ತು ನಡೆಸಿದೆ. ನಿನ್ನೆ ಸಂಜೆ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಎಐಸಿಸಿ ನಾಯಕರು ರಾತ್ರಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ತಲಾ ಐದಾರು ಆಕಾಂಕ್ಷಿಗಳು ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ. ಯಾರಿಗೇ ಟಿಕೆಟ್ ಕೊಟ್ಟರೂ ಉಳಿದವರು ಬಂಡಾಯವೇಳುವ ಸಾಧ್ಯತೆ ಇದೆ. ಎರಡನೇ ಪಟ್ಟಿ ರಿಲೀಸ್ ಮಾಡಿದಾಗಲೇ ಹಲವರು ಅಸಮಾಧಾನಗೊಂಡು ಬಂಡಾಯದ ಬಾವುಟ ಹಾರಿಸಿದ್ದಾರೆ. ಕೆಲವರು ಪಕ್ಷೇತರವಾಗಿ ನಿಲ್ಲೋದಾಗಿ ಘೋಷಣೆ ಕೂಡಾ ಮಾಡಿದ್ದಾರೆ. ಹೀಗಿರುವಾಗಲೇ ಕಾಂಗ್ರೆಸ್ ಮೂರನೇ ಪಟ್ಟಿ ಬಗ್ಗೆ ತಲೆ ಕೆಡಿಸಿಕೊಂಡಿದೆ.
ಮೂರನೇ ಪಟ್ಟಿಯಲ್ಲಿ 58 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಬೇಕಿದೆ. ಇವಿಷ್ಟೂ ಕ್ಷೇತ್ರಗಳಲ್ಲಿ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆಸಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಶಕ್ತಿ ಇರುವ ಹಲವು ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಕೂಡಾ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಬಳಿ ನಿರಂತರವಾಗಿ ಲಾಬಿ ನಡೆಸಿದ್ದಾರೆ. ಹೀಗಾಗಿ, ಹೈಕಮಾಂಡ್ಗೆ ಯಾರಿಗೆ ಟಿಕೆಟ್ ಕೊಡುವುದು ಎಂಬುದರ ಬಗ್ಗೆ ಗೊಂದಲ ಉಂಟಾಗಿದೆ.
ಬಿಜೆಪಿ ಒಂದೇ ಹಂತದಲ್ಲಿ 170-180 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಷ್ಟರೊಳಗೆ ಕಾಂಗ್ರೆಸ್ ಕೂಡಾ ಮೂರನೇ ಪಟ್ಟಿ ರಿಲೀಸ್ಗೆ ಸರ್ಕಸ್ ಮಾಡ್ತಾ ಇದೆ.