ಉತ್ತರ ಪ್ರದೇಶ, ಗುಜರಾತ್ ತಂತ್ರ ಉಪಯೋಗಿಸುತ್ತಾ ಬಿಜೆಪಿ..?
ನವದೆಹಲಿ; ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಹೈಕಮಾಂಡ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠ ನಾಯಕರು ನಾನಾ ಕೋನಗಳಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಉತ್ತರ ಪ್ರದೇಶ ಹಾಗೂ ಗುಜರಾತ್ ಚುನಾವಣೆಗಳಲ್ಲಿ ಮಾಡಿದಂತೆ ಹೊಸ ಮುಖಗಳನ್ನು ಕಣಕ್ಕಿಳಿಸಿ ಚುನಾವಣೆ ಗೆಲ್ಲಬಹುದಾ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರಿದ್ದಾರೆ. ಈ ಸಂಬಂದ ಮ್ಯಾರಥಾನ್ ಸಭೆಗಳು ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ ಇಂದು 170-180 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಕೆಲ ಅಚ್ಚರಿ ಅಭ್ಯರ್ಥಿಗಳೂ ಇರಬಹುದು. ಹಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿ ಮೊದಲ ಪಟ್ಟಿ ಬಗ್ಗೆ ಕುತೂಹಲ ಕೆರಳಿಸಿದೆ.
ಉತ್ತರ ಪ್ರದೇಶ ಹಾಗೂ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿತ್ತು. ಇದಕ್ಕೆ ಮುಖ್ಯ ಕಾರಣ ಹಲವಾರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳನ್ನು ಕಣಕ್ಕಿಳಿಸಿದ್ದು. ಜೊತೆಗೆ ಯುವಕರಿಗೆ ಹೆಚ್ಚು ಮಣೆ ಹಾಕಿದ್ದು. ಇದೀಗ ಇದೇ ತಂತ್ರವನ್ನು ಕರ್ನಾಟಕದಲ್ಲೂ ಬಳಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಹಲವು ಹಾಲಿ ಶಾಸಕರ ವಿರುದ್ಧ ಬೇರೆ ಬೇರೆ ಆರೋಪಗಳಿವೆ. ಕೆಲವು ಶಾಸಕರು ಸರಿಯಾಗಿ ಕೆಲಸ ಮಾಡಿಲ್ಲ ಅನ್ನೋ ಆರೋಪವಿದೆ. ಕೆಲ ಶಾಸಕರಿಗೆ ವಯಸ್ಸಾಗಿದೆ. ಅಂತಹವರಿಗೆಲ್ಲಾ ಟಿಕೆಟ್ ನಿರಾಕರಿಸಿ, ಅಲ್ಲಿ ಗೆಲ್ಲುವ ಹಾಗೂ ಉತ್ಸಾಹಿ ಯುವಕರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಆದ್ರೆ ಗುಜರಾತ್ ಹಾಗೂ ಉತ್ತರ ಪ್ರದೇಶ ರೀತಿಯ ತಂತ್ರ ದಕ್ಷಿಣ ಭಾರತದಲಿ ನಡೆಯೋದಿಲ್ಲ ಎಂದು ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವು ನಾಯಕರು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಹಲವು ಬಾರಿ ಚಿಂತನೆ ನಡೆಸಿದೆ.