ಚಿಕ್ಕಬಳ್ಳಾಪುರ; ಸುಧಾಕರ್ಗೆ ಕೈತಪ್ಪುತ್ತಾ ಬಿಜೆಪಿ ಟಿಕೆಟ್..?; ಅಲೋಕ್ ಪರ ಅಷ್ಟೊಂದು ಒಲವು ಯಾಕೆ..?
ಚಿಕ್ಕಬಳ್ಳಾಪುರ; ಕಳೆದ ಲೋಕಸಭಾ ಚುನಾವಣೆವರೆಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೇಳೋರೇ ಇರಲಿಲ್ಲ… ಇಲ್ಲಿ ಏನಿದ್ದರೂ ಮೊದಲಿನಿಂದಲೂ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ನಡುವೆಯೇ ಫೈಟ್ ಇದ್ದಿದ್ದು.. ಆದ್ರೆ ಈ ಬಾರಿ ಹಿಂದೆಂದೂ ಕಾಣದಷ್ಟು ಬಿಜೆಪಿ ಟಿಕೆಟ್ಗಾಗಿ ಫೈಟ್ ನಡೆದಿದೆ..
ಇದನ್ನೂ ಓದಿ; ವಿರೋಧಿಗಳಿಗೆ ಟಿಕೆಟ್ ತಪ್ಪಿಸಿದರಾ ಮಾಜಿ ಸಿಎಂ ಯಡಿಯೂರಪ್ಪ?; ಬಂಡಾಯಕ್ಕೆ ನಲುಗುತ್ತಾ ಕಮಲ ಪಕ್ಷ?
ಡಾ.ಕೆ.ಸುಧಾಕರ್ ಹಾಗೂ ಅಲೋಕ್ ನಡುವೆ ಫೈಟ್;
ಹಾಗೆ ನೋಡಿದರೆ, ಡಾ.ಕೆ.ಸುಧಾಕರ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದರಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಾಕಷ್ಟು ಚಿಗುರಿಕೊಂಡಿದೆ.. ಈ ಕಾರಣಕ್ಕಾಗಿಯೇ ಡಾ.ಕೆ.ಸುಧಾಕರ್ ಅವರು ಚಿಕ್ಕ ವಯಸ್ಸಿನಲ್ಲೇ ಸಿಎಂ ಆಗುವ ಕನಸು ಕಂಡಿದ್ದರು.. ಆದ್ರೆ ಚಿಕ್ಕಬಳ್ಳಾಪುರ ಮತದಾರ ಅದಕ್ಕೆ ತಣ್ಣೀರೆರಚಿತು.. ವಿಧಾನಸಭಾ ಚುನಾವಣೆಯಲ್ಲಿ ಸೋಲುಣಿಸುವ ಮೂಲಕ ಸುಧಾಕರ್ ಅವರ ವಿಜಯದ ನಾಗಾಲೋಟಕ್ಕೆ ಬ್ರೇಕ್ ಹಾಕಿತು.. ಇದಾದ ಮೇಲೆ ಡಾ.ಕೆ.ಸುಧಾಕರ್ ಸಾಕಷ್ಟು ಮಂಕಾಗಿದ್ದಾರೆ.. ಆ ಮಂಕು ಹೋಗಬೇಕಾದ್ರೆ ಅವರಿಗೊಂದು ಗೆಲುವು ಬೇಕು.. ಹೀಗಾಗಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬಯಸುತ್ತಿದ್ದಾರೆ… ಇತ್ತ, ಇದೇ ಕ್ಷೇತ್ರ ವ್ಯಾಪ್ತಿಗೆ ಬರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ಗೆ ಟಿಕೆಟ್ ಕೇಳಲಾಗುತ್ತಿದೆ.. ಬೇರೆ ಬೇರೆ ದೃಷ್ಟಿಕೋನದಲ್ಲಿ ಇಬ್ಬರೂ ಪ್ರಬಲರೇ.. ಹೀಗಾಗಿಯೇ ಟಿಕೆಟ್ಗಾಗಿ ಇಬ್ಬರ ನಡುವೆ ಫೈಟ್ ಇದ್ದು, ಹೈಕಮಾಂಡ್ ಈ ಕ್ಷೇತ್ರಕ್ಕೆ ಟಿಕೆಟ್ ಅನೌನ್ಸ್ ಮಾಡದೇ ಕಾದುನೋಡುವ ತಂತ್ರ ಅನುಸರಿಸುತ್ತಿದೆ..
ಇದನ್ನೂ ಓದಿ; ಕಾಂತೇಶ್ಗೆ ಟಿಕೆಟ್ ಇಲ್ಲ, ಶೆಟ್ಟರ್ಗೆ ಟಿಕೆಟ್ ಕನ್ಫರ್ಮ್ ಇಲ್ಲ!
ಗೆಲ್ಲೋ ಶಕ್ತಿ ಇದ್ದರೂ ಡಾ.ಕೆ.ಸುಧಾಕರ್ ಬಗ್ಗೆ ಏನೋ ಅನುಮಾನ;
ಡಾ.ಕೆ.ಸುಧಾಕರ್ಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗಲ್ಲೋ ಶಕ್ತಿ ಇದೆ.. ಹಣ ಕೂಡಾ ಖರ್ಚು ಮಾಡುವ ತಾಕತ್ತು ಹೊಂದಿದ್ದಾರೆ.. ಆದರೂ ಹೈಕಮಾಂಡ್ನಲ್ಲಿ ಸುಧಾಕರ್ ಬಗ್ಗೆ ಕೊಂಚ ಅನುಮಾನವಿದೆ.. ಯಾಕಂದ್ರೆ, ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಿಜೆಪಿಗೆ ಬಂದಿದ್ದ ಅವರ ಕೆಲ ಸ್ನೇಹಿತರು ಮತ್ತೆ ಕಾಂಗ್ರೆಸ್ ಹೊಸ್ತಿಲಲ್ಲಿ ನಿಂತಿದ್ದಾರೆ.. ಸುಧಾಕರ್ ಕೂಡಾ ಕಾಂಗ್ರೆಸ್ಗೆ ಹೋಗುತ್ತಾರೆ ಎಂಬ ಸುದ್ದಿಗಳು ಆಗಾಗ ಬರುತ್ತಲೇ ಇವೆ.. ಇದರ ಜೊತೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದಿದ್ದರೆ ಸುಧಾಕರ್ ಬೆಂಗಳೂರು ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ ಅನ್ನೋದು ಆರೋಪಗಳೂ ಕೇಳಿ ಬರುತ್ತಿವೆ.. ಹೀಗಾಗಿ, ಸುಧಾಕರ್ ಗೆ ಟಿಕೆಟ್ ಕೊಡೋ ಬದಲು ಮೂಲ ಬಿಜೆಪಿಗರಾಗಿರುವ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ಗೆ ಟಿಕೆಟ್ ಕೊಟ್ಟರೆ ಹೇಗೆ ಎಂಬ ಚರ್ಚೆಗಳು ನಡೆಯುತ್ತಿವೆ..
ಇದನ್ನೂ ಓದಿ;ಬಿಜೆಪಿ ಎರಡನೇ ಪಟ್ಟಿ ಪ್ರಕಟ; ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ವಿವರ
ಅಲೋಕ್ ವಿಶ್ವನಾಥ್ ಶಕ್ತಿ ಏನು ಗೊತ್ತಾ..?;
ಎಸ್.ಆರ್.ವಿಶ್ವನಾಥ್ ಅವರಿಗೆ ಯಲಹಂಕದಲ್ಲಿ ಸಾಕಷ್ಟು ಪ್ರಾಬಲ್ಯವಿದೆ.. ಇನ್ನು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲಗಳಲ್ಲಿ ಸುಧಾಕರ್ ಅವರಿಗಿಂತ ಎಸ್.ಆರ್.ವಿಶ್ವನಾಥ್ಗೆ ಟಚ್ ಜಾಸ್ತಿ ಇದೆ.. ಇಲ್ಲಿನ ಸ್ಥಳೀಯ ನಾಯಕರ ಜೊತೆ ಎಸ್.ಆರ್.ವಿಶ್ವನಾಥ್ ಉತ್ತ ಬಾಂದವ್ಯ ಇಟ್ಟುಕೊಂಡಿದ್ದಾರೆ. ಹೀಗಾಗಿ ಎಸ್.ಆರ್.ವಿಶ್ವನಾಥ್ ಪುತ್ರನಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು ಎಂಬ ಮಾತಿದೆ. ಇನ್ನು ಎಸ್.ಆರ್.ವಿಶ್ವನಾಥ್ ಗೆ ಆರ್ಎಸ್ಎಸ್ ಶ್ರೀರಕ್ಷೆ ಇದೆ… ಯಡಿಯೂರಪ್ಪ ಅವರ ಬೆಂಬಲವೂ ಇದೆ.. ಜೊತೆಗೆ ಎಸ್.ಆರ್.ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಅವರು ಕೂಡಾ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸಾಕಷ್ಟು ಜನ ಸಂಪರ್ಕ ಇಟ್ಟುಕೊಂಡಿದ್ದಾರೆ. ಇದೆಲ್ಲಾ ಅಲೋಕ್ ಗೆಲುವಿಗೆ ಅನುಕೂಲ ಆಗುತ್ತೆ ಎಂದು ಹೇಳಲಾಗುತ್ತಿದೆ.
ಆದ್ರೆ ಎಸ್.ಆರ್.ವಿಶ್ವನಾಥ್ ಅವರಿಗೆ ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಪರಿಚಯವಿಲ್ಲ.. ಇನ್ನು ಅಲೋಕ್ ಅವರು ಇದುವರೆಗೂ ಎಲ್ಲೂ ರಾಜಕೀಯವಾಗಿ ಕಾಣಿಸಿಕೊಂಡಿಲ್ಲ.. ಅಲೋಕ್ಗೆ ಟಿಕೆಟ್ ಕೊಟ್ಟರೆ ಅದು ನೆಪ ಮಾತ್ರ.. ವಿಶ್ವನಾಥ್ ಅವರೇ ಓಡಾಡಬೇಕು.. ಅವರ ಹೆಸರು ಹಾಗೂ ಬಿಜೆಪಿ ಹೆಸರಿನಲ್ಲೇ ಅವರು ಗೆಲ್ಲಬೇಕು..
ಇದನ್ನೂ ಓದಿ; ಈಶ್ವರಪ್ಪ ಬಂಡಾಯವೇಳೋದು ಪಕ್ಕಾನಾ..?; ಕುತೂಹಲ ಕೆರಳಿಸಿದ ನಾಳಿನ ಸಭೆ!
ಡಾ.ಕೆ.ಸುಧಾಕರ್ ಅವರ ಪ್ರಾಬಲ್ಯ ಎಷ್ಟಿದೆ..?
ಡಾ.ಕೆ.ಸುಧಾಕರ್ ಅವರು ಸ್ವಂತ ಶಕ್ತಿಯಿಂದ ರಾಜಕೀಯದಲ್ಲಿ ನೆಲಯೂರಿದವರು.. ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ಧಾಗ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ 800 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದರು.. ಹೀಗಾಗಿ ಸುಧಾಕರ್ ಪ್ರಬಲರಾದರು. ನಂತರ ಬೊಮ್ಮಾಯಿ ಸರ್ಕಾರದ ವೇಳೆಯೂ ಅವರು ಸಾಕಷ್ಟು ಅನುದಾನ ತಂದರು.. ಆದ್ರೆ ಲೋಕಸಭಾ ಕ್ಷೇತ್ರ ಎಂದು ಬಂದಾಗ ಸುಧಾಕರ್ಗೆ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಮಾತ್ರ ಪ್ರಾಬಲ್ಯವಿದೆ.. ಉಳಿದ ಕ್ಷೇತ್ರಗಳಲ್ಲಿ ಸುಧಾಕರ್ ಅವರಿಗೆ ಅಷ್ಟೇ ಪ್ರಾಬಲ್ಯವಿಲ್ಲ..
ಇನ್ನು ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಅವರು ಸುಧಾಕರ್ಗೆ ತುಂಬು ಮನಸ್ಸಿನಿಂದ ಸಪೋರ್ಟ್ ಮಾಡೋದು ಡೌಟು.. ಅಲೋಕ್ಗೆ ಟಿಕೆಟ್ ಸಿಗದಿದ್ದರೆ, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಎಸ್.ಆರ್.ವಿಶ್ವನಾಥ್ ಅವರು ಸುಧಾಕರ್ಗೆ ಸಪೋರ್ಟ್ ಮಾಡೋದು ಕೂಡಾ ಡೌಟಿದೆ.. ಇದರ ಜೊತೆಗೆ ಸುಧಾಕರ್ ಪರವಾಗಿ ಯಡಿಯೂರಪ್ಪ ನಿಲ್ಲುವುದಿಲ್ಲ ಎಂಬ ಮಾತಿದೆ.. ಆದ್ರೆ, ಮೈತ್ರಿ ಪಕ್ಷ ಜೆಡಿಎಸ್ ನಾಯಕರು ಸುಧಾಕರ್ಗೆ ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಇದರ ಜೊತೆಗೆ ಬಿ.ಎಲ್.ಸಂತೋಷ್ ಹಾಗೂ ಬೊಮ್ಮಾಯಿ ಕೂಡಾ ಸುಧಾಕರ್ ಪರವಾಗಿದ್ದಾರೆ ಎಂದು ತಿಳಿದುಬಂದಿದೆ..
ಒಕ್ಕಲಿಗ ಮತಗಳು ಹೆಚ್ಚಿದ್ದರೂ ಇಲ್ಲಿ ಗೆದ್ದಿರೋದು ಇಬ್ಬರೇ ಒಕ್ಕಲಿಗರು!;
ಡಾ.ಕೆ.ಸುಧಾಕರ್ ಹಾಗೂ ಅಲೋಕ್ ಇಬ್ಬರೂ ಒಕ್ಕಲಿಗರು.. ಒಕ್ಕಲಿಗ ಮತಗಳು ಹೆಚ್ಚಿರುವುದರಿಂದ ಇಬ್ಬರಲ್ಲಿ ಯಾರಿಗೆ ಕೊಟ್ಟರೂ ಗೆಲ್ಲಬಹುದು ಎಂಬ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.. ಇದರ ನಡುವೆ ಅಲೋಕ್ ಅವರು ಕರ್ನಾಟಕದ ಒಕ್ಕಲಿಗರಲ್ಲ, ಅವರು ಆಂಧ್ರದ ರೆಡ್ಡಿಗಳು ಎಂಬ ವಿಚಾರವೂ ಹೆಚ್ಚು ಚರ್ಚೆಯಲ್ಲಿದೆ..
ಹಾಗೇ ನೋಡಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಇಬ್ಬರು ಒಕ್ಕಲಿಗರು ಮಾತ್ರ ಗೆದ್ದಿದ್ದಾರೆ… ಇಲ್ಲಿ ಬೆರಳೆಣಿಕೆ ಸಂಖ್ಯೆಯ ಮತಗಳಿರುವ ಹಿಂದುಳಿದ ವರ್ಗಗಳ ನಾಯಕರೇ ಹೆಚ್ಚು ಚುನಾಯಿತರಾಗಿದ್ದಾರೆ. ಇಲ್ಲಿ ಈಡಿಗರು ನಾಲ್ಕು ಬಾರಿ, ಬ್ರಾಹ್ಮಣರು ಮೂರು ಬಾರಿ, ದೇವಾಡಿಗರು ಎರಡು ಬಾರಿ ಹಾಗೂ ಆರ್ಯವೈಶ್ಯರು ಒಮ್ಮೆ ಗೆಲುವು ಸಾಧಿಸಿದ್ದಾರೆ. ಇದನ್ನು ನೋಡಿದರೆ ಚಿಕ್ಕಬಳ್ಳಾಪುರದ ಜನ ಜಾತಿ ನೋಡಿ ಮತ ಹಾಕೋದಿಲ್ಲ ಅನ್ನೋದು ಗೊತ್ತಾಗುತ್ತದೆ.
ಇದನ್ನೂ ಓದಿ; ಮಾಜಿ ಸಿಎಂ ಸದಾನಂದಗೌಡ ಕಾಂಗ್ರೆಸ್ ಸೇರುತ್ತಾರಾ..?; ಡಿ.ಕೆ.ಶಿವಕುಮಾರ್ ಈ ಬಗ್ಗೆ ಹೇಳಿದ್ದೇನು..?
ಇಬ್ಬರೇ ಒಕ್ಕಲಿಗರು ಇದುವರೆಗೆ ಗೆದ್ದಿದ್ದು;
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವಾದ ಮೇಲೆ ಮೊದಲ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಎಂ.ವಿ.ಕೃಷ್ಣಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.. ಇದಾದ ಮೇಲೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್.ಬಚ್ಚೇಗೌಡರು ಗೆಲುವು ಸಾಧಿಸಿದ್ದರು. ಇವರು ಇಬ್ಬರೇ ಇದುವರೆಗೆ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಒಕ್ಕಲಿಗ ನಾಯಕರು.
1980ರಲ್ಲಿ ಆರ್ಯವೈಶ್ಯ ಸಮುದಾಯದ ಎಸ್.ಎನ್.ಪ್ರಸನ್ನ ಕುಮಾರ್ ಅವರು ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.. ಅವರ ಗೆಲುವಿನ ಅಂತರವನ್ನು ಇದುವರೆಗೂ ಯಾರೂ ಮುರಿಯೋದಕ್ಕೆ ಸಾಧ್ಯವಾಗಿಲ್ಲ. ಅನಂತರ 1984ರಿಂದ 1991ರವರೆಗೆ ಬ್ರಾಹ್ಮಣ ಸಮುದಾಯದ ವಿ.ಕೃಷ್ಣರಾವ್ ಸಂಸದರಾಗಿದ್ದರು. 1996ರಿಂದ 2004ರವರೆಗೆ ಈಡಿಗ ಸಮುದಾಯದ ಆರ್.ಎಲ್.ಜಾಲಪ್ಪ ಸಂಸದರಾಗಿ, ಕೇಂದ್ರ ಸಚಿವರಾಗಿದ್ದರು. 2009ರಿಂದ 2014ರವರೆಗೆ ದೇವಾಡಿಗ ಸಮುದಾಯದ ಎಂ.ವೀರಪ್ಪ ಮೊಯ್ಲಿಯವರು ಸಂಸದರಾಗಿ, ಕೇಂದ್ರ ಸಚಿವರಾಗಿದ್ದರು. ಈ ಕ್ಷೇತ್ರದಲ್ಲಿ ದೇವಾಡಿಗ ಸಮುದಾಯದ ಒಂದೇ ಒಂದು ಮತ ಇಲ್ಲದಿರುವುದು ವಿಶೇಷ.
ಇದನ್ನೂ ಓದಿ; ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್, ಟ್ರಂಪ್ ಫೈಟ್
ಯಾವ ಜಾತಿಯ ಎಷ್ಟು ಮತಗಳಿವೆ..?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ಕ್ಷೇತ್ರದಲ್ಲಿ ಸುಮಾರು 4.50 ಲಕ್ಷದಷ್ಟು ಒಕ್ಕಲಿಗ ಮತಗಳಿವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 5 ಲಕ್ಷ ಮತಗಳಿವೆ.. ಬಲಿಜ ಸಮುದಾಯದ 1.80 ಲಕ್ಷ ಮತಗಳಿವೆ.. ಹೀಗಾಗಿ ಇಲ್ಲಿ ದಲಿತ ಸಮುದಾಯದ ಮತಗಳು ನಿರ್ಣಾಯಕವಾಗುತ್ತವೆ.