ಭಾರತ-ಇಂಗ್ಲೆಂಡ್ ಟೆಸ್ಟ್; ಭಾರತ 255ಕ್ಕೆ ಆಲೌಟ್, ಇಂಗ್ಲೆಂಡ್ಗೆ 399 ಗುರಿ
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಕುತೂಹಲಕಾರಿಯಾಗಿ ನಡೆಯುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ.
ಇದಕ್ಕೂ ಮುನ್ನ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 255 ರನ್ಗಳಿಗೆ ಆಲೌಟ್ ಆಗಿತ್ತು. ಶುಭಮನ್ ಗಿಲ್ 104 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಅಕ್ಷರ್ ಪಟೇಲ್ 45 ರನ್ ಗಳಿಸಿದರು. ಉಳಿದ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡದ ಕಾರಣ ಟೀಂ ಇಂಡಿಯಾ ಕಡಿಮೆ ಸ್ಕೋರ್ ಗೆ ಸೀಮಿತವಾಯಿತು.
ಇಂಗ್ಲೆಂಡ್ ಬೌಲರ್ಗಳಲ್ಲಿ ಟಾಮ್ ಹಾರ್ಟ್ಲಿ 4 ಮತ್ತು ರೆಹಾನ್ ಅಹ್ಮದ್ 3 ವಿಕೆಟ್ ಪಡೆದರು. 399 ರನ್ ಗಳ ಬೃಹತ್ ಗುರಿಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆಕ್ರಮಣಕಾರಿ ಆಟವಾಡಿತು. ಆರಂಭಿಕರಾದ ಬೆನ್ ಡಕೆಟ್ ಮತ್ತು ಜಾಕ್ ಕ್ರಾಲಿ ಪ್ರತಿ ಓವರ್ಗೆ ಐದು ರನ್ ಗಳಿಸಿದರು.
ರವಿಚಂದ್ರನ್ ಅಶ್ವಿನ್ 11 ಓವರ್ಗಳಲ್ಲಿ ಈ ಜೋಡಿಯನ್ನು ಬೇರ್ಪಡಿಸಿದರು. 27 ಎಸೆತಗಳಲ್ಲಿ 28 ರನ್ ಗಳಿಸಿದ್ದ ಡಕೆಟ್ ಅಶ್ವಿನ್ ಬೌಲಿಂಗ್ ನಲ್ಲಿ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು.
ಆಟಕ್ಕೆ ಎರಡು ದಿನ ಬಾಕಿ ಇದೆ. ಭಾರತ ಗೆಲ್ಲಲು ಇನ್ನೂ ಒಂಬತ್ತು ವಿಕೆಟ್ಗಳ ಅಗತ್ಯವಿದೆ. ಇಂಗ್ಲೆಂಡ್ ಗೆಲುವಿಗೆ ಇನ್ನೂ 332 ರನ್ ಗಳ ಅಗತ್ಯವಿದೆ. ಜಾಕ್ ಕ್ರಾಲಿ (29) ಮತ್ತು ರೆಹಾನ್ ಅಹ್ಮದ್ (8) ಕ್ರೀಸ್ನಲ್ಲಿದ್ದಾರೆ.