ಸರ್ಕಾರಿ ನೌಕರನ ಹಣೆಗೆ ಗನ್ನಿಟ್ಟು ಬಲವಂತವಾಗಿ ಮದುವೆ!
ಇತ್ತೀಚೆಗಷ್ಟೇ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಆತನಿಗೆ ಬಂದೂಕು ತೋರಿಸಿ, ಯುವತಿಯೊಬ್ಬಳ ಜೊತೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಪೊಲೀಸ್ ವರದಿ ಪ್ರಕಾರ, ವೈಶಾಲಿ ಜಿಲ್ಲೆಯ ಮಹೇಯಾ ಮಾಲ್ಪುರ್ ಗ್ರಾಮದ ಗೌತಮ್ ಕುಮಾರ್ ಎಂಬ ಯುವಕ ಇತ್ತೀಚೆಗೆ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾನೆ. ರೇಪುರದ ಉತ್ಕರಿಮಿತ್ ಮಧ್ಯ ವಿದ್ಯಾಲಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಸಿಕ್ಕಿತು. ಇತ್ತೀಚೆಗೆ ಅವರು ಕರ್ತವ್ಯಕ್ಕೆ ಸೇರಿದ್ದರು.
ಆದರೆ, ಬುಧವಾರ ಮಧ್ಯಾಹ್ನ ಕಾರಿನಲ್ಲಿ ಬಂದ ಕೆಲವರು ಗೌತಮ್ ಅವರನ್ನು ಬಲವಂತವಾಗಿ ಶಾಲೆಯಿಂದ ಕರೆದೊಯ್ದಿದ್ದಾರೆ. ಈ ವಿಷಯ ತಿಳಿದ ಗೌತಮ್ ಕುಟುಂಬಸ್ಥರು ಆತಂಕಗೊಂಡಿದ್ದರು. ಕೂಡಲೇ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆರಂಭದಲ್ಲಿ ಪೊಲೀಸರು ಪ್ರಕರಣವನ್ನು ನಿರ್ಲಕ್ಷಿಸಿದ್ದರಿಂದ ಅದೇ ದಿನ ರಾತ್ರಿ ಆತನ ಕುಟುಂಬಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತ ಪೊಲೀಸರು ಗೌತಮ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ಆತನ ಪತ್ತೆಯಾಯಿತು.
ಗೌತಮ್ ಅವರನ್ನು ರಾಜೇಶ್ ರಾಯ್ ಎಂಬ ವ್ಯಕ್ತಿ ಅಪಹರಿಸಿ ತನ್ನ ಮಗಳನ್ನು ಮದುವೆಯಾಗಲು ಒತ್ತಾಯಿಸಿದ್ದಾನೆ. ಈ ಹಿಂದೆ ತನ್ನ ಪುತ್ರಿ ಚಾಂದಿನಿಯನ್ನು ಮದುವೆಯಾಗುವಂತೆ ಮಗನಿಗೆ ಹೇಳಿದ್ದು, ನಿರಾಕರಿಸಿದಾಗ ದೈಹಿಕ ಹಲ್ಲೆಯನ್ನೂ ನಡೆಸಿದ್ದಾನೆ ಎಂದು ಸಂತ್ರಸ್ತನ ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಅಲ್ಲಿಗೆ ತಲುಪಿದಾಗ ಗೌತಮ್ ಮತ್ತು ಚಾಂದಿನಿ ಮದುವೆಯಾಗಿದ್ದರು. ನವವಿವಾಹಿತರನ್ನು ಮನೆಯೊಳಗೆ ಕೂಡಿಹಾಕಿ ಮನೆಗೆ ಬೀಗ ಹಾಕಿದ್ದರು. ಬಂದೂಕು ತೋರಿಸಿ ಬಲವಂತವಾಗಿ ಥಳಿಸಿದ್ದಕ್ಕೆ ಗೌತಮ್ ಕೋಪಗೊಂಡಿದ್ದರು. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.