UCC Explained: ಏಕರೂಪ ನಾಗರಿಕ ಸಂಹಿತೆ ವರದಿಗೆ ಉತ್ತರಾಖಂಡ ಸಂಪುಟ ಒಪ್ಪಿಗೆ!
ಡೆಹ್ರಾಡೂನ್; ಉತ್ತರಾಖಂಡ ಸರ್ಕಾರದ ಸಚಿವ ಸಂಪುಟ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವರದಿಗೆ ಇಂದು ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಫೆಬ್ರವರಿ 6 ರಂದು ಉತ್ತರಾಖಂಡ ರಾಜ್ಯ ಅಸೆಂಬ್ಲಿಯಲ್ಲಿ ಯುಸಿಸಿಯನ್ನು ಮಂಡಿಸಲಾಗುತ್ತಿದ್ದು, ಈ ಬಗ್ಗೆ ಚರ್ಚೆ ನಡೆಯಲಿದೆ.
ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅಂತಿಮ ಕರಡು ವರದಿಯನ್ನು ಶುಕ್ರವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಐವರು ಸದಸ್ಯರ ಸಮಿತಿಯಿಂದ ಹಸ್ತಾಂತರ ವಾಗಿತ್ತು. ಇಂದು ಈ ವರದಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಮೂಲಕ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಏನಿದು ಏಕರೂಪ ನಾಗರಿಕ ಸಂಹಿತೆ..?
ಮದುವೆ, ವಿಚ್ಛೇದನ, ಆನುವಂಶಿಕತೆ ಮತ್ತು ದತ್ತು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಧರ್ಮದ ವಿಭಿನ್ನ ವೈಯಕ್ತಿಕ ಕಾನೂನುಗಳನ್ನು ಬದಲಿಸಲು ಯುಸಿಸಿ ಏಕರೂಪದ ಕಾನೂನುಗಳ ಗುಂಪನ್ನು ರಚಿಸುವ ಗುರಿಯನ್ನು ಹೊಂದಿದೆ. ಇದು ಸಂವಿಧಾನದ 44 ನೇ ವಿಧಿಯಿಂದ ಬಂದಿದೆ.
ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ-ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯಾತೀತ ಪೌರ ಕಾನೂನುಗಳ ಮೂಲಕ ಆಡಳಿತ ನಡೆಸುತ್ತದೆ. ಈ ಕಾನೂನು ತಮ್ಮ ಧರ್ಮ ಅಥವಾ ಜಾತಿ ಅಥವಾ ಜನಾಂಗ/ಬುಡಕಟ್ಟುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಆಡಳಿತಕ್ಕೊಳಪಡುವ ನಾಗರಿಕರ ಹಕ್ಕನ್ನು ರದ್ದುಗೊಳಿಸುತ್ತದೆ.
UCC ಕರಡು ಏನು ಒಳಗೊಂಡಿದೆ..?
ಇನ್ನೂ ಇದು ಸಾರ್ವಜನಿಕವಾಗಿಲ್ಲದಿದ್ದರೂ, ಕರಡಿನ ಉದ್ದೇಶಿತ ವಿಷಯಗಳ ಕುರಿತು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಮದುವೆ ನೋಂದಣಿಗಳು ಕಡ್ಡಾಯವಾಗುವ ಸಾಧ್ಯತೆಯಿದೆ ಮತ್ತು ಲಿವ್-ಇನ್ ಸಂಬಂಧಗಳನ್ನು ಸಹ ನೋಂದಾಯಿಸಬೇಕಾಗಬಹುದು.
ಗಂಡನ ಮರಣದ ಸಂದರ್ಭದಲ್ಲಿ ಹೆಂಡತಿಯು ಪರಿಹಾರವನ್ನು ಪಡೆಯುತ್ತಾಳೆ ಮತ್ತು ಮೃತ ಸಂಗಾತಿಯ ವಯಸ್ಸಾದ ಪೋಷಕರ ಪೋಷಣೆಯ ಜವಾಬ್ದಾರಿಯನ್ನು ಹೊಂದಿರುತ್ತಾಳೆ ಎಂದು ಕರಡು ಸೂಚಿಸುವ ಸಾಧ್ಯತೆಯಿದೆ. ಅವಳು ಮರುಮದುವೆಯಾದರೆ, ಪರಿಹಾರವನ್ನು ಅವಳ ಹಿಂದಿನ ಗಂಡನ ಪೋಷಕರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.
ವರದಿ ಸಿದ್ಧಪಡಿಸಲು ಎಷ್ಟೆಲ್ಲಾ ಸಭೆಗಳು, ಚರ್ಚೆಗಳು ನಡೆದವು?
ಉತ್ತರಾಂಂಡ್ ರಾಜ್ಯ ಸರ್ಕಾರ 2022ರ ಮೇ 27ರಂದು ವರದಿ ತಯಾರಿಸಲು ಐವರು ಗಣ್ಯರಿದ್ದ ಸಮಿತಿಯನ್ನು ರಚಿಸಲಾಗಿತ್ತು. ಜೊತೆಗೆ ಜನರ ಅಭಿಪ್ರಾಯಗಳನ್ನು ಆಹ್ವಾನಿಸಿ, ಆ ಅಭಿಪ್ರಾಯಗಳನ್ನು ಸಂಗ್ರಹಿಸುವುದಕ್ಕಾಗಿಯೇ ಎರಡು ಉಪ ಸಮಿತಿಗಳನ್ನು ಕೂಡಾ ರಚನೆ ಮಾಡಲಾಗಿತ್ತು.
ಸಮಿತಿ ರಚನೆಯಾದಾಗಿನಿಂದ ಒಟ್ಟು 43 ಸಾರ್ವಜನಿಕ ಸಂವಾದಗಳು ನಡೆದಿವೆ. ಜೊತೆಗೆ ಉಪಸಮಿತಿಗಳು ಸುಮಾರು 2.3 ಲಕ್ಷ ಜನರಿಂದ ಸಲಹೆಗಳನ್ನು ಸ್ವೀಕರಿಸಿವೆ. ಇದು ಉತ್ತರಾಖಂಡದ ಶೇಕಡಾ ಹತ್ತರಷ್ಟು ಕುಟುಂಬಗಳಿಗೆ ಸಮಾನವಾಗಿದೆ. ಇದರ ಹೊರತಾಗಿ, ಅಂತಿಮ ಕರಡಿಗೆ ಹೋಗುವ ಅಂಶಗಳನ್ನು ಚರ್ಚಿಸಲು 72 ಸಭೆಗಳು ನಡೆದಿವೆ.
ನಿವೃತ್ತ ನ್ಯಾಯಮೂರ್ತಿ ಪೆರ್ಮೋದ್ ಕೊಹ್ಲಿ ಹಾಗೂ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಸಮಿತಿಯ ನೇತೃತ್ವ ವಹಿಸಿದ್ದರು. ಇತರ ಸದಸ್ಯರಲ್ಲಿ ಸಮಾಜ ಸೇವಕ ಮನು ಗೌರ್, ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಮತ್ತು ಡೂನ್ ವಿಶ್ವವಿದ್ಯಾಲಯದ ವಿ-ಸಿ ಸುರೇಖಾ ದಂಗ್ವಾಲ್ ಸೇರಿದ್ದಾರೆ.