ವರ್ಷದ ಮೊದಲ ದಿನ ಇಸ್ರೋ ಶುಭಾರಂಭ; ಎಕ್ಸ್‌ಪೋ ಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ
ಶ್ರೀಹರಿಕೋಟಾ; 2024 ರ ಮೊದಲ ದಿನ, ಇಸ್ರೋ ‘ಎಕ್ಸ್-ರೇ ಪೋಲಾರಿಮೀಟರ್’ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು. ಇಂದು ಬೆಳಗ್ಗೆ ಪಿಎಸ್‌ಎಲ್‌ವಿ-ಸಿ58 ಬಾಹ್ಯಾಕಾಶ ನೌಕೆ ಉಪಗ್ರಹವನ್ನು ಗಗನಕ್ಕೆ ಹೊತ್ತೊಯ್ಯಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು.
ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹವು ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟು ಭೂಮಿಯಿಂದ 650 ಕಿ.ಮೀ ದೂರದಲ್ಲಿರುವ ಸ್ಥಿರ ಕಕ್ಷೆಯನ್ನು ಪ್ರವೇಶಿಸಿದೆ. ಈ ಬಗ್ಗೆ ಇಸ್ರೋ ವಿಜ್ಞಾನಿಗಳು ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಪಿಎಸ್‌ಎಲ್‌ವಿ-ಸಿ58 ಬಾಹ್ಯಾಕಾಶ ನೌಕೆಯು ತಿರುವನಂತಪುರಂ ಎಲ್‌ಬಿಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ವುಮೆನ್‌ನ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಮತ್ತೊಂದು ಉಪಗ್ರಹ ಎಕ್ಸ್‌ಪೋಸ್ಯಾಟ್ ಮತ್ತು ಇತರ ಕೆಲವು ಉಪಗ್ರಹಗಳನ್ನು ಹೊತ್ತೊಯ್ದಿದೆ.
ಎಕ್ಸ್ ಪೋಸ್ಯಾಟ್ ಐದು ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಕಾಸ್ಮಿಕ್ ಎಕ್ಸ್-ರೇ ಡೇಟಾವನ್ನು ಸಂಗ್ರಹಿಸುತ್ತದೆ. ಇಸ್ರೋ ತಯಾರಿಸಿರುವ ಈ ಉಪಗ್ರಹ ಬಾಹ್ಯಾಕಾಶದಲ್ಲಿ ವೀಕ್ಷಣಾಲಯವಾಗಿ ಕಾರ್ಯನಿರ್ವಹಿಸುತ್ತದೆ.