ಅಮಿತ್ ಶಾ ಮೀಟಿಂಗ್ ಬಳಿಕವೇ ಬಿಜೆಪಿ ಪಟ್ಟಿ; ಯಾಕಿಷ್ಟು ಕನ್ಫ್ಯೂಷನ್..?
ನವದೆಹಲಿ; ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ನಾಯಕರು ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದು ಎರಡು ದಿನ ಆದರೂ ಕೂಡಾ ಬಿಜೆಪಿ ಮೊದಲ ಪಟ್ಟಿ ರಿಲೀಸ್ ಆಗಿಲ್ಲ. ಈ ನಡುವೆ ಇಂದೂ ಕೂಡಾ ಬಿರುಸಿನ ಚಟುವಟಿಕೆ ನಡೆದಿದೆ. ಇಂದು ಬೆಳಗ್ಗೆಯಿಂದ ಸಿಎಂ ಬಸವರಾಜ ಬೊಮ್ಮಾಯಿಯವರು ಧರ್ಮೇಂದ್ರ ಪ್ರಧಾನ್ ಹಾಗೂ ಪ್ರಹ್ಲಾದ್ ಜೋಷಿಯವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಮೊದಲಿಗೆ ಧರ್ಮೇಂದ್ರ ಪ್ರಧಾನ್ ನಿವಾಸಕ್ಕೆ ಭೇಟಿ ನೀಡಿದ್ದ ಬೊಮ್ಮಾಯಿಯವರು ಒಂದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಇತ್ತ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲೂ ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಲಾಗಿದೆ. ಈ ವೇಳೆ ಬೊಮ್ಮಾಯಿ ಗೊಂದಲದಲ್ಲಿದ್ದದ್ದು ಕಂಡುಬಂತು. ಈ ವೇಳೆ ಮಾಧ್ಯಮಗಳಿಗೂ ಬೊಮ್ಮಾಯಿಯವರು ಸರಿಯಾಗಿ ಉತ್ತರಿಸಿಲ್ಲ. ಇವತ್ತು ಪಟ್ಟಿ ನಿರೀಕ್ಷೆ ಮಾಡಬಹುದು ಎಂದಷ್ಟೇ ಹೇಳಿ ಮುನ್ನಡೆದಿದ್ದಾರೆ.
ಇನ್ನು ಇಂದಿನ ಸಭೆಗಳ ಬಳಿಕ ಪಟ್ಟಿ ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಅಮಿತ್ ಶಾ ಅವರು ಇದಕ್ಕೆ ಅಂತಿಮ ಒಪ್ಪಿಗೆ ನೀಡಿದರ ಮೇಲೆಯೇ ಬಿಡುಗಡೆ ಎಂದು ಹೇಳಲಾಗುತ್ತಿದೆ. ಆದ್ರೆ ಅಮಿತ್ ಶಾ ಅವರು ಅರುಣಾಚಲ ಪ್ರದೇಶದಲ್ಲಿದ್ದು, ಮಧ್ಯಾಹ್ನದ ನಂತರ ದೆಹಲಿಗೆ ಬರಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಅಮಿತ್ ಶಾ ನೇತೃತ್ವದ ಸಭೆ ನಡೆಯಲಿದೆ. ಈ ಸಭೆ ಬಳಿಕ ಪಟ್ಟಿ ಅಂತಿಮ ಅಂತಿಮವಾಗಿದ್ದರೆ ಅದನ್ನು ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.